×
Ad

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಆರೋಗ್ಯ ವಿಜ್ಞಾನ, ವಾಕ್‌ಶ್ರವಣ ವಿಭಾಗದ 294 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ

Update: 2017-04-01 21:42 IST

ಮಂಗಳೂರು,ಎ.1: ನಿರ್ದಿಷ್ಟ ಗುರಿಯೊಂದಿಗೆ ಸಾಧಿಸುವ ಛಲವಿದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಹೇಳಿದ್ದಾರೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಇತರ ಆರೋಗ್ಯ ವಿಜ್ಞಾನ ಸಂಸ್ಥೆಗಳ ಹಾಗೂ ಫಾದರ್ ಮುಲ್ಲರ್ ವಾಕ್‌ಶ್ರವಣ ಕಾಲೇಜಿನ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆತ್ಮವಿಶ್ವಾಸ ಹಾಗೂ ಪರಿಶ್ರಮವಿದ್ದಾಗ ಯೋಜಿತ ಗುರಿಯನ್ನು ಯಶಸ್ವಿಯಾಗಿ ಸಾಧಿಸಬಹುದು ಎಂದವರು ಹೇಳಿದರು.

ಪದವಿ ಪ್ರದಾನ ಮಾಡಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾನಿಲಯ ಸಹ ಕುಲಪತಿ ಡಾ. ಜಿ.ಕೆ.ಪ್ರಭು, ಇಂದು ಪದವಿಯನ್ನು ಪಡೆದಿರುವ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕೆಂದರು.

ಜೀವನದಲ್ಲಿ ಏರಿಳಿತಗಳು ಸಾಮಾನ್ಯವಾಗಿವೆ. ಪ್ರಯತ್ನಕ್ಕೆ ಯಶಸ್ಸು ಸಿಗಲು ಸಮಯಾವಕಾಶ ತೆಗೆದುಕೊಳ್ಳಬಹುದು. ಆದರೆ, ಇದನ್ನು ಸೋಲು ಎಂದು ಪರಿಗಣಿಸಿ ಹತಾಶರಾಗಬೇಕಾಗಿಲ್ಲ. ಧೈರ್ಯದಿಂದ ಮುಂದೆ ಸಗಾಬೇಕೆಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಇತರ ಆರೋಗ್ಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ.ಜೆ.ಪಿ. ಆಳ್ವ, ಫಾದರ್ ಮುಲ್ಲರ್ ವಾಕ್‌ ಶ್ರವಣ ಕಾಲೇಜಿನ ಪ್ರಾಂಶುಪಾಲ ಅಖಿಲೇಶ್ ಪಿ.ಎಂ. ಅವರು ಪದವೀಧರರ ವಿವರ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು.

  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಫಾ.ರುಡೋಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ , ಫಾದರ್ ಮುಲ್ಲರ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಸಂಜೀವ ರೈ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಸಂಸ್ಥೆಗಳ ಪ್ರಭಾರ ನಿರ್ದೇಶಕ ಫಾ.ರಿಚರ್ಡ್ ಆಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು. 2016ನೆ ಸಾಲಿನ ಅತ್ಯುತ್ತಮ ನಿರ್ಗಮನ ಪದವೀಧರೆ ಡಾ.ಸಹನಾ ಅವರಿಗೆ ಚಿನ್ನದ ಪದಕ ಪುರಸ್ಕಾರ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಪಿಸಿಯೋಥೆರಪಿ, ಹಾಸ್ಪಿಟಲ್ ಆಡ್ಮಿನಿಸ್ಟ್ರೇಶನ್, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ವೈದ್ಯಕೀಯ ಇಮೇಜಿಂಗ್ ತಂತ್ರಜ್ಞಾನ , ರೇಡಿಯೊಥೆರಪಿ, ವಾಕ್‌ಶ್ರವಣ ಪದವೀಧರರು ಸೇರಿ ಒಟ್ಟು 294 ಮಂದಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News