×
Ad

ದೇವರ ದಾಸಿಮಯ್ಯ ಸಮಾನತೆಗಾಗಿ ವಚನಗಳ ಮೂಲಕ ಶ್ರಮಿಸಿದ್ದರು: ಅಪರ ಜಿಲ್ಲಾಧಿಕಾರಿ ಅನುರಾಧ

Update: 2017-04-01 21:58 IST

ಉಡುಪಿ, ಎ.1: ಆದ್ಯ ವಚನಕಾರ ದೇವರ ದಾಸಿಮಯ್ಯ ತಮ್ಮ ವಚನದ ಮೂಲಕ ಸಮಾಜದಲ್ಲಿರುವ ಜಾತಿಪದ್ಧತಿಯನ್ನು ತೊಲಗಿಸಿ ಸಮಾನತೆ ಮೂಡಿ ಸಲು ಶ್ರಮಿಸಿದ್ದರು ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಶನಿವಾರ ಆಯೋಜಿಸಲಾದ ದೇವರ ದಾಸಿಮಯ್ಯ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನುಷ್ಯ ತನ್ನಲ್ಲಿನ ಅಹಂಕಾರವನ್ನು ತೊರೆದು ಭಕ್ತಿಯ ಮಾರ್ಗದಲ್ಲಿ ನಡೆದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ಅವರು ತಮ್ಮ ವಚನ ದಲ್ಲಿ ಪ್ರತಿಪಾದಿಸಿದ್ದರು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ, ವರ್ಗ ತಾರತಮ್ಯದ ವಿರುದ್ದ ತಮ್ಮ ವಚನಗಳ ಮೂಲಕ ಸಮಾಜದ ಅಂಕು ಡೊಂಕು ಗಳನ್ನು ತಿದ್ದುವ ಕೆಲಸ ಮಾಡಿದ್ದರು ಎಂದರು.

ಸ್ತ್ರೀಸಮಾನತೆ ಬಗ್ಗೆ ಒತ್ತಿ ಹೇಳಿದ, ಕಾಯಕದ ಮಹತ್ವ ತಿಳಿಸಿದ, ಜಾತೀಯತೆ ಮುಕ್ತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅವರು, ರಾಮನಾಥ ಎಂಬ ಅಂಕಿತ ನಾಮದಿಂದ ರಚಿಸಿರುವ ವಚನಗಳನ್ನು ಅರ್ಥೈಸಿಕೊಂಡು, ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ದೇವರ ದಾಸಿಮಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಕುಂದಾಪುರದ ಭಂಡಾರ್ಕರ್ಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ವಿ.ಬನ್ನಾಡಿ ಮಾತನಾಡಿ, ಜಾತಿ, ವರ್ಗ, ಲಿಂಗತ್ವ ವರ್ಗಿಕರಣದಲ್ಲಿ ರಚನೆಯಾದ ಸಮಾಜದಲ್ಲಿನ ಕಂದಾಚಾರ, ವೌಡ್ಯ, ಅಂಧಶ್ರದ್ದೆಗಳ ಬಗ್ಗೆ ಆದ್ಯ ವಚನಕಾರ ದೇವರ ದಾಸಿಮಯ್ಯ ಧ್ವನಿ ಎತ್ತಿದ್ದರು. ಜನಸಮಾನ್ಯರ ಬದುಕು, ಭಾವನೆಗಳನ್ನು ಕಾವ್ಯವನ್ನಾಗಿಸಿ, ತಮ್ಮ ಅನುಭವದ ಮೂಲಕ ವಚನಗಳನ್ನು ರಚಿಸಿ, ಕಾಯಕದ ಮಹತ್ವನ್ನು ಅವರು ತಿಳಿಸಿದ್ದರು ಎಂದರು.

ಅಧ್ಯಕ್ಷತೆಯನ್ನು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿ ದ್ದರು. ದ.ಕ. ಪದ್ಮಶಾಲಿ ಮಹಾಸಭಾದ ಸಂಚಾಲಕ ಪ್ರೇಮಾನಂದ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮಾ ವಂದಿಸಿದರು. ಶಂಕರದಾಸ್ ಚೆಂಡ್ಕಳ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಶಬ ರಾಯ ಮತ್ತು ತಂಡ ದವರಿಂದ ವಚನ ಗಾಯಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News