ಬಡವರಿಗೆ ಸಿಗಬೇಕಾದ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಿ: ನಗರಸಭಾ ಅಧಿಕಾರಿಗಳಿಗೆ ಶಾಸಕಿ ಶಕುಂತಳಾ ಶೆಟ್ಟಿ ಸೂಚನೆ
ಪುತ್ತೂರು, ಎ.1: ಮನೆ ನಿವೇಶನ ಸೇರಿದಂತೆ ಬಡವರಿಗೆ ಸಿಗಬೇಕಾದ ಯೋಜನೆಗಳು ಶೀಘ್ರ ಅವರಿಗೆ ತಲುಪುವಂತೆ ಕ್ರಮ ಕೈಗೊಳ್ಳುವಂತೆ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಪುತ್ತೂರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪುತ್ತೂರು ನಗರಸಭೆಯ ನಗರ ಬಡತನ ನಿರ್ಮೂಲನಾ ಕೋಶದ ಆಶ್ರಯದಲ್ಲಿ ಶನಿವಾರ ನಗರಸಭೆ ಸಭಾಂಗಣದಲ್ಲಿ ನಡೆದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರಕಾರಿ ಯೋಜನೆಯಲ್ಲಿ ಮನೆ ಕಟ್ಟುವ ಫಲಾನುಭವಿಗಳು ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದೇ ಹಂತದಲ್ಲಿ ಎಲ್ಲ ಕೆಲಸ ಮುಗಿಸಿದರೆ ಹಣ ಸಿಗುವುದಿಲ್ಲ. ಒಟ್ಟು 4 ಹಂತಗಳಿದ್ದು, ಪ್ರತೀ ಹಂತವೂ ಜಿಪಿಎಸ್ ಆಗಬೇಕಾಗಿರುವ ಕಾರಣ ಆಯಾ ಹಂತದ ಮಾಹಿತಿ ಸಲ್ಲಿಕೆಯಾದ ಮೇಲೆ ಆ ಕಂತಿನ ಹಣ ಸಿಗುತ್ತದೆ. ಕೊನೆಯ ಬಿಲ್ ಸಿಗುವವರೆಗೂ ನಿಯಮ ಪಾಲನೆ ಮಾಡುತ್ತಿದ್ದರೆ ಮಾತ್ರ ಸರಕಾರದ ಹಣ ಸಿಗುತ್ತದೆ. ಇದನ್ನು ಬಿಟ್ಟು ಐಶಾರಾಮಿ ಮನೆ ಕಟ್ಟಲು ಹೊರಟರೆ ಸರ್ಕಾರದ ಅನುದಾನ ಪಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಹಿಂದೆ ಉಳುವವನೇ ಹೊಲದೊಡೆಯ ಎಂಬ ಕಾನೂನು ಭೂಮಸೂದೆಯ ಮಾದರಿಯಲ್ಲಿ ಇದಿಗ ಯಾರದೇ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದವರಿಗೆ ಆ ಮನೆಯ ಅಡಿಸ್ಥಳ ಅದರ ಅನುಭೋಗದಾರನಿಗೆ ಸಿಗುವಂಥ ಕಾನೂನು ಮಂಡನೆಯಾಗಿದೆ. ಮುಂದಿನ ಮೂರು ತಿಂಗಳಲ್ಲಿ ಈ ಕಾನೂನು ಜಾರಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ವಿಶ್ವನಾಥ್ ಗೌಡ, ಸದಸ್ಯ ಮಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.
ಪೌರಾಯುಕ್ತೆ ರೂಪಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ 24: 10ರ ನಿಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಶೌಚಾಲಯ ರಚನೆ, ಮನೆ ದುರಸ್ತಿ, ವೈದ್ಯಕೀಯ ವೆಚ್ಚ ಇತ್ಯಾದಿಗಳನ್ನು ಭರಿಸಲಾಗುತ್ತಿದೆ. 2016- 17ನೇ ಸಾಲಿನಲ್ಲಿ ಈ ಯೋಜನೆಯಡಿಯಲ್ಲಿ ರೂ. 26 ಲಕ್ಷ ವೈಯಕ್ತಿಕ ನೆರವು ನೀಡಲಾಗಿದೆ. ಪ್ರಸ್ತುತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 83 ಫಲಾನುಭವಿಗಳಿಗೆ ರೂ. 3.30 ಲಕ್ಷ ಹಾಗೂ ಇತರ 53 ಫಲಾನುಭವಿಗಳಿಗೆ ರೂ. 2.70 ಲಕ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.