×
Ad

ಕರ್ಣಾಟಕ ಬ್ಯಾಂಕ್‌ಗೆ 1,10,000 ಕೋ.ರೂ ಆರ್ಥಿಕ ವ್ಯವಹಾರದ ಗುರಿ: ಜಯರಾಮ ಭಟ್

Update: 2017-04-02 00:05 IST

  ಮಂಗಳೂರು, ಎ.1: ದೇಶದ ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ 2017-18ನೆ ಸಾಲಿನಲ್ಲಿ 1,10,000 ಕೋ.ರೂ. ಆರ್ಥಿಕ ವ್ಯವಹಾರ ನಡೆಸುವ ಗುರಿಯನ್ನು ಹೊಂದಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್ ತಿಳಿಸಿದ್ದಾರೆ.

ಅವರು ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ವಾರ್ಷಿಕ ಆರ್ಥಿಕ ಪ್ರಗತಿ ವಿವರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 64,500 ಕೋ.ರೂ.ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. 2017ರ ಮಾರ್ಚ್ ಅಂತ್ಯದಲ್ಲಿ ಬ್ಯಾಂಕ್ 2,145 ಸೇವಾ ಕೇಂದ್ರಗಳನ್ನು 765 ಶಾಖೆಗಳನ್ನು 1,380 ಎಟಿಎಂಗಳನ್ನು 110 ಇ-ಲಾಬಿ ಮತ್ತು ಮಿನಿ ಇ-ಲಾಬಿಗಳನ್ನು ಹೊಂದಿದೆ.

  ‘ಬ್ಯಾಂಕ್ 2016-17ನೆ ಸಾಲಿನಲ್ಲಿ ಜಾಗತಿಕವಾಗಿ ಹಾಗೂ ದೇಶದೊಳಗಿನ ಹಣದ ಅಪನಗದೀಕರಣ ಯೋಜನೆಯ ಪರಿಣಾಮವಾಗಿ ಉಂಟಾದ ಪ್ರತಿಕೂಲ ಪರಿಸ್ಥಿತಿಯಲ್ಲೂ ತೃಪ್ತಿಕರ ಪ್ರಗತಿ ಸಾಧಿಸಿದೆ.ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ 1,10,000 ಕೋಟಿ ರೂ.ಗಳ ಆರ್ಥಿಕ ವ್ಯವಹಾರದ ಗುರಿ, 35 ಹೊಸ ಶಾಖೆ, ಒಂಬತ್ತು ಆರ್ಥಿಕ ವಿಸ್ತರಣಾ ಶಾಖೆಗಳನ್ನು ಮತ್ತು ಒಟ್ಟು ಬ್ಯಾಂಕ್ ಶಾಖೆಗಳನ್ನು 800ಕ್ಕೆ ಮತ್ತು ಎಟಿಎಂ ಸಂಖ್ಯೆಯನ್ನು 1,450ಕ್ಕೆ, ಇ-ಲಾಬಿ ಸಂಖ್ಯೆಯನ್ನು 150ಕ್ಕೆ ಏರಿಸುವ ಗುರಿ ಹೊಂದಲಾಗಿದೆ.

ಗ್ರಾಹಕರ ಸೇವೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏಕ ಗವಾಕ್ಷಿ ಸೇವಾ ಕೇಂದ್ರಗಳನ್ನು ಹೆಚ್ಚಿಸುವ ಮತ್ತು ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಬ್ಯಾಂಕ್ ಗ್ರಾಹಕರಿಗೆ ನೀಡುವ ಗುರಿ ಹೊಂದಲಾಗಿದೆ. ಬ್ಯಾಂಕ್ ಎನ್‌ಪಿಎಸ್,ಬಜಾಜ್ ಎಲೈನ್ಸ್ ಜೊತೆಗಿನ ವಿಮಾ ಪಾಲಿಸಿ ಸೌಲಭ್ಯ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಸೌಲಭ್ಯ ಗ್ರಾಹಕರಿಗೆ ಒದಗಿಸಲು ಬ್ಯಾಂಕ್ ಕ್ರಮ ಕೈಗೊಳ್ಳಲಾಗುವುದು’ ಎಂದು ಜಯರಾಮ ಭಟ್ ತಿಳಿಸಿದರು.

ಈ ಸಂದರ್ಭ ಮುಖ್ಯ ಮಹಾಪ್ರಬಂಧಕ ಎಂ.ಎಸ್.ಮಹಾಬಲೇಶ್ವರ ಹಾಗೂ ಮಹಾ ಪ್ರಬಂಧಕರಾದ ಡಾ.ಮೀರಾ ಅರಾನ್ಹ, ರಘುರಾಮ, ರಾಘವೇಂದ್ರ ಭಟ್, ಚಂದ್ರಶೇಖರ ರಾವ್, ಸುಭಾಶ್ಚಂದ್ರ ಪುರಾಣಿಕ್, ವೈ.ವಿ.ಬಾಲಚಂದ್ರ, ಮುರಳೀಧರ ಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News