ನಾಳೆಯಿಂದ ಗ್ರಾಪಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ಮಂಗಳೂರು, ಎ.1: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದ.ಕ. ಜಿಲ್ಲೆಯ ಗ್ರಾಪಂ ನೌಕರರು ಎ.3ರಂದು ಬೆಳಗ್ಗೆ 9:30ರಿಂದ ದ.ಕ. ಜಿಪಂ ಕಚೇರಿ ವಠಾರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ.
ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರ ಸಂಘ ಹಾಗೂ ಗ್ರಾಪಂ ನೌಕರರ ಸಂಘದ ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ ಎಂದು ಸಂಘದ ದ.ಕ. ಜಿಲ್ಲಾ ಅಧ್ಯಕ್ಷ ಪಿ.ಎಚ್.ಪ್ರಕಾಶ್ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗ್ರಾಪಂ ಹಂತದ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಮೇಲಿನ ಅವೈಜ್ಞಾ ನಿಕ ಒತ್ತಡ ನಿವಾರಣೆ, ನೌಕರರ ಭಡ್ತಿಗೆ ಆಗ್ರಹಿಸಿ ಈ ಮುಷ್ಕರ ನಡೆಸಲು ನಿರ್ಧ ರಿಸಿದ್ದೇವೆ ಎಂದು ಅವರು ಹೇಳಿದರು.
ಉದ್ಯೋಗ ಖಾತ್ರಿ ಉತ್ಕೃಷ್ಟ ಯೋಜನೆ. ಆದರೆ ಯೋಜನೆ ಅನುಷ್ಠಾನ ಹಂತದಲ್ಲಿ ಅಧಿಕಾರಿಗಳ ಕಡೆಯಿಂದಲೇ ತಪ್ಪುಗಳಾಗುತ್ತಿವೆ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಾಮಾಣಿಕವಾಗಿ ದುಡಿಯುವವರಿಗೆ ಸೇವಾ ಭದ್ರತೆ ಇಲ್ಲ. ಕನಿಷ್ಠ ವೇತನ ಸಂಬಂಧಿಸಿದ ವಿಷಯ ಸಕಾರಾತ್ಮಕವಾಗಿ ಬಗೆಹರಿದಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಸರಕಾರದ ಹಲವು ಯೋಜನೆಗಳ ಅನುಷ್ಠಾನ ಕಷ್ಟವಾಗುತ್ತಿದೆ ಎಂದವರು ಸಮಸ್ಯೆ ವಿವರಿಸಿದರು.
ಗ್ರಾಪಂ ಅಧಿಕಾರಿಗಳ ಭಡ್ತಿಗೆ ಸಂಬಂಧಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಲೆಕ್ಕ ಸಹಾಯಕರ ಪರಿವೀಕ್ಷಣಾ ಅವಧಿ ಘೋಷಣೆಗೆ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಸಿಬ್ಬಂದಿಗೆ ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಪಂಚಾಯತ್ ನೌಕರರ ವಿರುದ್ಧದ ಪ್ರಕರಣಗಳನ್ನು ಇಲಾಖಾ ತನಿಖೆ ನಡೆಸದೆ ನೇರವಾಗಿ ಲೋಕಾಯುಕ್ತಕ್ಕೆ ವಹಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದವರು ಆಗ್ರಹಿಸಿದರು.
ಮುಖಂಡರಾದ ಯು.ಡಿ.ಶೇಖರ್, ಜೆರಾಲ್ಡ್ ಮಸ್ಕರೇನ್ಹಸ್, ಶಾಂತಾರಾಂ ಮತ್ತು ಯಶವಂತ್ ಉಪಸ್ಥಿತರಿದ್ದರು.