ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆೆ ಕಿರುಕುಳ
ಮಂಗಳೂರು, ಎ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ನಡೆಯುತ್ತಿರುವ ಕಿರುಕುಳದ ವಿರುದ್ಧ ಹೋರಾಟ ನಡೆಸಲು ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್‌ಖಾನ್ ಕೊಡಾಜೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳುವ ಪ್ರಯಾಣಿಕರಿಗೆ ಅಲ್ಲಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಿರುಕುಳ ನೀಡುತ್ತಿರುವುದರ ವಿರುದ್ಧ ಹೋರಾಟ ಸಂಘಟಿಸುವುದು, ಎ.14ರಂದು ಡಾ.ಬಿ.ಆರ್.ಅಂಬೇಡ್ಕರ್‌ರ ಜನ್ಮ ದಿನದ ಪ್ರಯುಕ್ತ ದ.ಕ. ಜಿಲ್ಲಾದ್ಯಂತ ಸಾಮಾಜಿಕ ನ್ಯಾಯ ದಿನ ಆಚರಿಸುವುದು, ‘ಭೀತಿಯ ರಾಜಕೀಯದ ವಿರುದ್ಧ ಐಕ್ಯರಾಗೋಣ’ ಎಂಬ ಘೋಷಣೆಯಡಿ ಈ ತಿಂಗಳಲ್ಲಿ ನಡೆಯಲಿರುವ ಪಕ್ಷದ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಜಿಲ್ಲೆಯಲ್ಲೂ ಕಾರ್ಯಕ್ರಮ ಆಯೋಜನೆ ಹಾಗೂ ಮಾಹಿತಿ ಹಕ್ಕಿನ ಕೆಲಸ ಕಾರ್ಯಗಳನ್ನು ಗ್ರಾಮ ಮಟ್ಟದಲ್ಲೂ ಇನ್ನೂ ಸಕ್ರಿಯಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.