ಪ್ರತಿ 3-4 ವರ್ಷಗಳಿಗೆ ನೋಟುಗಳ ಭದ್ರತಾ ಲಕ್ಷಣಗಳ ಬದಲಾವಣೆಗೆ ಸರಕಾರದ ಚಿಂತನೆ

Update: 2017-04-02 09:55 GMT

ಹೊಸದಿಲ್ಲಿ,ಎ.2: ನಕಲಿ ನೋಟುಗಳ ಪಿಡುಗಿಗೆ ಕಡಿವಾಣ ಹಾಕಲು ಜಾಗತಿಕ ವಾಡಿಕೆಗನುಗುಣವಾಗಿ ಪ್ರತಿ 3-4 ವರ್ಷಗಳಿಗೊಮ್ಮೆ 500 ಮತ್ತು 2,000 ರೂ.ನೋಟುಗಳ ಭದ್ರತಾ ಲಕ್ಷಣಗಳಲ್ಲಿ ಬದಲಾವಣೆ ಮಾಡಲು ಸರಕಾರವು ಉದ್ದೇಶಿಸಿದೆ.

ನೋಟು ಅಮಾನ್ಯದ ಬಳಿಕ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಭಾರೀ ಪ್ರಮಾಣದ ನಕಲಿ ನೋಟುಗಳು ವಶವಾಗಿರುವ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಸರಕಾರವು ಮುಂದಾಗಿದೆ.

 ಗುರುವಾರ ನಡೆದ,ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ ಮೆಹರಿಷಿ ಅವರು ಸೇರಿದಂತೆ ವಿತ್ತ ಮತ್ತು ಗೃಹ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದ ಉನ್ನತಮಟ್ಟದ ಸಭೆಯಲ್ಲಿ ಈ ಬಗ್ಗೆ ಎಳೆಎಳೆಯಾಗಿ ಚರ್ಚಿಸಲಾಗಿದೆ.

ಹೆಚ್ಚಿನ ಶ್ರೀಮಂತ ರಾಷ್ಟ್ರಗಳು ಪ್ರತಿ 3-4 ವರ್ಷಗಳಿಗೊಮ್ಮೆ ತಮ್ಮ ಕರೆನ್ಸಿ ನೋಟುಗಳ ಭದ್ರತಾ ಲಕ್ಷಣಗಳನ್ನು ಬದಲಿಸುತ್ತವೆ. ಭಾರತವೂ ಈ ನೀತಿಯನ್ನು ಅನುಸರಿಸುವುದು ತುಂಬ ಅಗತ್ಯವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸಭೆಯಲ್ಲಿ ಪ್ರತಿಪಾದಿಸಿದ್ದಾರೆ.

ಭಾರತದಲ್ಲಿ ದೊಡ್ಡ ಮುಖಬೆಲೆಯ ನೋಟುಗಳ ಭದ್ರತಾ ಲಕ್ಷಣಗಳಲ್ಲಿ ಬದಲಾವಣೆಗಳನ್ನು ಮಾಡಿ ಹಲವು ವರ್ಷಗಳೇ ಸರಿದು ಹೋಗಿವೆ. 2000ರಲ್ಲಿ ಚಲಾವಣೆಗೆ ಬಂದಿದ್ದ 1,000 ರೂ.ನೋಟುಗಳ ಭದ್ರತಾ ಲಕ್ಷಣಗಳಲ್ಲಿ ನೋಟು ಅಮಾನ್ಯದವರೆಗೆ ಪ್ರಮುಖ ಬದಲಾವಣೆಯೇನೂ ಆಗಿರಲಿಲ್ಲ. 1987ರಲ್ಲಿ ಚಲಾವಣೆಗೆ ಬಂದಿದ್ದ ಹಳೆಯ 500 ರೂ.ನೋಟುಗಳ ಭದ್ರತಾ ಲಕ್ಷಣಗಳಲ್ಲಿ ಬದಲಾವಣೆಗಳನ್ನು ಮಾಡಿ ದಶಕವೇ ಕಳೆದಿತ್ತು.

ಈಗ ಹೊಸದಾಗಿ ಬಿಡುಗಡೆಯಾಗಿರುವ 5,00 ಮತ್ತು 2,000 ರೂ.ನೋಟುಗಳಲ್ಲಿ ಯಾವುದೇ ಹೆಚ್ಚುವರಿ ಭದ್ರತಾ ಲಕ್ಷಣಗಳಿಲ್ಲ, ಅವು ಹಳೆಯ 500 ಮತ್ತು 1,000 ರೂ.ನೋಟುಗಳಲ್ಲಿನ ಭದ್ರತಾ ಲಕ್ಷಣಗಳನ್ನೇ ಹೊಂದಿವೆ.

 ಇತ್ತೀಚಿಗೆ ವಶಪಡಿಸಿಕೊಳ್ಳಲಾಗಿರುವ ನಕಲಿ ನೋಟುಗಳ ಸೂಕ್ಷ್ಮ ಪರಿಶೀಲನೆಯಲ್ಲಿ 17 ಭದ್ರತಾ ಲಕ್ಷಣಗಳ ಪೈಕಿ ಕನಿಷ್ಠ 11ನ್ನು ಯಥಾವತ್ತಾಗಿ ನಕಲು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News