" ಸೃಷ್ಟಿಕರ್ತನ ವೈಜ್ಞಾನಿಕ ವ್ಯವಸ್ಥೆಗೆ ಸೆಡ್ಡು ಹೊಡೆಯಲು ಜಗತ್ತಿನಲ್ಲಿ ಯಾವುದೇ ಶಕ್ತಿಗೂ ಸಾಧ್ಯವಿಲ್ಲ "
ಕುಂಜತ್ತೂರು, ಎ.2: ಜಗತ್ತಿನಲ್ಲಿ ಅತೀ ಪ್ರಬಲ ಶಕ್ತಿಯಾಗಿರುವ ಅಮೇರಿಕ ಸೇರಿದಂತೆ ಜಗತ್ತಿನ ಯಾವುದೇ ಶಕ್ತಿಗೂ ಸೃಷ್ಟಿಕರ್ತನ ವೈಜ್ಞಾನಿಕ ಸಂವಿಧಾನಕ್ಕೆ ಸೆಡ್ಡು ಹೊಡೆಯುವುದಾಗಲೀ, ಅದನ್ನು ಮೀರಿಸುವ ಪ್ರಯತ್ನವಾಗಲೀ ಈ ತನಕ ಎಲ್ಲಿಯೂ ಫಲಪ್ರದವಾಗಲಿಲ್ಲ. ಇನ್ನೂ ಮುಂದಕ್ಕೂ ಅದು ಫಲಪ್ರದವಾಗಲಿಕ್ಕಿಲ್ಲ. 1,400 ವರ್ಷಕ್ಕೆ ಮೊದಲು ಪ್ರವಾದಿ ಮುಹಮ್ಮದ್ ಲೋಕಕ್ಕೆ ನೀಡಿದ ವೈಜ್ಞಾನಿಕ ಸಂದೇಶವನ್ನು ಆಧುನಿಕ ಯುಗದ ವಿಜ್ಞಾನಿಗಳು ಇಂದು ಪತ್ತೆ ಹಚ್ಚುತಿದ್ದಾರೆ ಎಂದು ಕೇರಳ ರಾಜ್ಯ ಸರಕಾರದ ಅಲ್ಪ ಸಂಖ್ಯಾತ ಆಯೋಗದ ಸದಸ್ಯ ಖ್ಯಾತ ವಿದ್ವಾಂಸ ಮುಳ್ಳೂರುಕ್ಕರ ಮುಹಮ್ಮದಲಿ ಸಖಾಫಿ ಹೇಳಿದರು.
ಉದ್ಯಾವರ ಅಸ್ಸಯದ್ದ್ ಶಹೀದ್ ವಲಿಯುಲ್ಲಾಯಿ (ರ.ಅ) ಮಖಾಂ ಶರೀಫ್ ಹರಿಕೆ ವಾರ್ಷಿಕೋತ್ಸವದ ನಾಲ್ಕನೇ ದಿವಸವಾದ ಶನಿವಾರ ರಾತ್ರಿ “ಸೈಬರ್ ಯುಗ ಹಾಗು ಮುಸಲ್ಮಾನರು” ಎಂಬ ವಿಷಯದ ಬಗ್ಗೆ ಉದ್ಯಾವರ ಜುಮಾ ಮಸೀದಿ ಅಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಾಮಾಜಿಕ ಜಾಲ ತಾಣಗಳಿಂದಾಗಿ ಯುವ ಸಮೂಹ ಹಳಿ ತಪ್ಪುತ್ತಿದೆ. ನಾವು ಆಡಿದ ಮಾತುಗಳು ಕ್ಷಣಾರ್ಧದಲ್ಲಿ ಜಗತ್ತಿನ ಮೂಲೆ ಮೂಲೆಗೂ ರವಾನೆಯಾಗುತ್ತಿದೆ. ಆದರೆ ಅಹಿತಕರವಲ್ಲದ ಸಮಾಜಕ್ಕೆ ಪೂರಕವಾಗಿರುವ ಸಂದೇಶಗಳು ರವಾನೆಯಾಗಲಿ ಎಂದು ಹೇಳಿದರು.
ದರ್ಗಾ ಶೆರೀಫ್ ಝಿಯಾರತ್ ಬಳಿಕ ಗಣ್ಯ ವ್ಯಕ್ತಿಗಳನ್ನು ದಫ್ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ಜಮಾಹತ್ ಅಧ್ಯಕ್ಷ ಅತ್ತಾವುಲ್ಲ ತಂಘಲ್ ಅಧ್ಯಕ್ಷತೆ ವಹಿಸಿದರು. ಜಮಾಹತ್ ಖತೀಬ್ ಅಬ್ದುಲ್ ಸಲಾಂ ಮದನಿ ಪ್ರಾಸ್ತಾವಿಕ ಭಾಷಣ ಗೈದರು.
ವೇದಿಕೆಯಲ್ಲಿ ದರ್ಗಾ ಶರೀಫ್ ಅಧ್ಯಕ್ಷ ಎ ಕೆ ಮೊಹಮ್ಮದ್ ಮೋನು ಹಾಜಿ, ಜಮಾಹತ್ ಮುದರ್ರಿಸ್ ಬಿ ಎನ್ ಅಬ್ದುಲ್ ಖಾದರ್ ಮುಸ್ಲಿಯಾರ್, ದರ್ಗಾಶರೀಫ್ ಪ್ರ. ಕಾರ್ಯದರ್ಶಿ ಪಳ್ಳಿಕುಂಞಿಹಾಜಿ, ಜಮಾಹತ್ ಪ್ರ. ಕಾರ್ಯದರ್ಶಿ ಖಾದರ್ ಫಾರೂಕ್, ಇಬ್ರಾಹಿಂ ಉಮ್ಮರ್ ಹಾಜಿ, ಅಬೂಬಕ್ಕರ್ ಮಾಹಿನ್, ಸೂಫಿ ಹಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.