×
Ad

ಮಂಗಳೂರು: ಪೊಲೀಸ್ ಧ್ವಜ ದಿನಾಚರಣೆ

Update: 2017-04-02 20:08 IST

ಮಂಗಳೂರು, ಎ.2: ಮಂಗಳೂರು ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹಾಗು ಕೆಎಸ್ಸಾರ್ಪಿ 7ನೆ ಪಡೆಯ ಜಂಟಿ ಆಶ್ರಯದಲ್ಲಿ ರವಿವಾರ ನಗರದ ಪೊಲೀಸ್ ಮೈದಾನದಲ್ಲಿ ಪೊಲೀಸ್ ಧ್ವಜ ದಿನ ಹಾಗು ಕಲ್ಯಾಣ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ನಗರ ಸಶಸ್ತ್ರ ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ಕೆಎಸ್ಸಾರ್ಪಿ ಪಡೆಯು ಪಥಸಂಚಲನ ನಡೆಸಿತು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಎಸಿಪಿ ಮದನ್ ಗಾಂವ್ಕರ್ ಪೊಲೀಸ್ ಇಲಾಖೆಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿದೆ. ಆ ಹಿನ್ನಲೆಯಲ್ಲಿ ಪೊಲೀಸರು ನಾಗರಿಕರ ಜೊತೆ ಸಂಯಮದಿಂದ ವರ್ತಿಸಬೇಕು. ಪೊಲೀಸರ ಮೆದುಳು ಚುರುಕಾಗಿರಬೇಕು ಮತ್ತು ಮಾತು ಸದಾ ಎಚ್ಚರಿಕೆಯಿಂದ ಕೂಡಿರಬೇಕು. ಇವರೆಡೂ ತಾಳ ತಪ್ಪಿದರೆ ಅಪಾಯ ಖಂಡಿತ ಎಂದರು.

ವೃತ್ತಿ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುವುದು ದೊಡ್ಡ ಸಾಧನೆ. ಇತ್ತೀಚಿನ ದಿನಗಳಲ್ಲಿ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ನಡುವೆ ಸಮನ್ವಯತೆ ಇದೆ. ಪ್ರತಿಯೊಬ್ಬ ಪೊಲೀಸರೂ ಅಧ್ಯಯನ ಮತ್ತು ವಿಷಯ ಮನನ ಮಾಡಿಕೊಳ್ಳುವ ಅಗತ್ಯವಿದೆ. ಪೊಲೀಸರಿಗೆ ಪ್ರೋತ್ಸಾಹ ತುಂಬಲು ಠಾಣಾ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವಂತಾಗಬೇಕು ಎಂದು ಮದನ್ ಗಾಂವ್ಕರ್ ಹೇಳಿದರು.

ಪೊಲೀಸ್ ಆಯುಕ್ತ ಚಂದ್ರಶೇಖರ್ ಎಂ. ಮಾತನಾಡಿ ಪ್ರಸಕ್ತ ವರ್ಷ ನಗರ ಪೊಲೀಸ್ ಇಲಾಖೆಯ 340 ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ 200 ಮಂದಿ ಪೊಲೀಸರು ಭಡ್ತಿ ಪಡೆದಿದ್ದಾರೆ. 1,137 ಅಧಿಕಾರಿಗಳು ಮತ್ತು ಪೊಲೀಸರು ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದಿದ್ದಾರೆ. ನಿವೃತ್ತ ಪೊಲೀಸರಿಗೆ ಅನ್ನಭಾಗ್ಯದ ಪ್ರಯೋಜನೆ ಪಡೆಯುವ ಬಗ್ಗೆ ಸರಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರಲ್ಲದೆ, ಜಿಲ್ಲೆಯ 8 ಮಂದಿ ಪೊಲೀಸರಿಗೆ ಮುಖ್ಯಮಂತ್ರಿಯ ಪದಕ ಲಭಿಸಿರುವುದು ಹೆಮ್ಮೆಯ ವಿಚಾರ ಎಂದರು.

ನಗದು ಬಹುಮಾನ:

ಬೋಲ ಪುಷ್ಪರಾಜ ಶೆಟ್ಟಿಯ ಸ್ಮರಣಾರ್ಥ ನಳಿನಿ ಎಸ್. ಭಂಡಾರಿ ಅವರು ಇಂಜಿನಿಯರಿಂಗ್, ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಪೊಲೀಸ್ ಅಧಿಕಾರಿಗಳ ಮಕ್ಕಳಿಗೆ ನಗದು ಬಹುಮಾನ ವಿತರಿಸಿದರು.*

59 ಮಂದಿಗೆ ಸನ್ಮಾನ:

ಪೊಲೀಸ್ ಕಮಿಷನರೇಟ್ ಹಾಗೂ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಈ ವರ್ಷ ನಿವೃತ್ತಿ ಹೊಂದಿದ 59 ಮಂದಿ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

 ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್ ರಾವ್ ಬೊರಸೆ, ಡಿಸಿಪಿಗಳಾದ ಶಾಂತರಾಜು, ಡಾ. ಸಂಜೀವ ಪಾಟೀಲ್, ಕೆಎಸ್ಸಾರ್ಪಿ ಕಮಾಂಡೆಂಟ್ ಜನಾರ್ದನ ಆರ್. ಮತ್ತಿತರರು ಪಾಲ್ಗೊಂಡು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News