ಆರ್‌ಬಿಐ ಗವರ್ನರ್ ಸಂಬಳ ಶೇ.100ಕ್ಕೂ ಹೆಚ್ಚು ಏರಿಕೆ
ಹೊಸದಿಲ್ಲಿ, ಎ.2: ರಿಸರ್ವ್ ಬ್ಯಾಂಕ್‌ನ ಗವರ್ನರ್ ಉರ್ಜಿತ್ ಪಟೇಲ್ ಮತ್ತು ಉಪ ಗವರ್ನರ್ ವಿರಲ್ ಆಚಾರ್ಯ ಅವರ ಸಂಬಳದಲ್ಲಿ ಭಾರೀ ಹೆಚ್ಚಳವಾಗಿದ್ದು ಸರಕಾರ ಅವರ ಮೂಲ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಗವರ್ನರ್ ಮೂಲ ವೇತನ 2.5 ಲಕ್ಷ ರೂ. ಮತ್ತು ಉಪಗವರ್ನರ್ ಮೂಲ ವೇತನ 2.25 ಲಕ್ಷ ರೂ.ಗೆ ಹೆಚ್ಚಿಸಲಾಗಿದ್ದು ಇದು 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಆರ್‌ಬಿಐ ತಿಳಿಸಿದೆ.
ಇದುವರೆಗೆ ಇವರ ಮೂಲ ವೇತನ ಅನುಕ್ರಮವಾಗಿ 90,000 ರೂ. ಮತ್ತು 80,000 ರೂ. ಆಗಿತ್ತು. ಆದರೂ ಇವರಿಬ್ಬರ ಸಂಬಳ ಆರ್‌ಬಿಐ ನಿಯಂತ್ರಣದ ಕೆಲವು ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳಿಂತ ಕಡಿಮೆಯಾಗಿದೆ ಎಂದು ಆರ್‌ಬಿಐ ವೆಬ್‌ಸೈಟ್‌ನ ಇತ್ತೀಚಿನ ಮಾಹಿತಿಯಲ್ಲಿ ತಿಳಿದು ಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಆರ್‌ಬಿಐ, ಫೆ.21ರಂದು ವಿತ್ತ ಸಚಿವಾಲಯ ನೀಡಿದ ಸೂಚನೆಯಂತೆ ಗವರ್ನರ್ ಮತ್ತು ಉಪಗವರ್ನರ್ ಅವರ ಸಂಬಳ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ. ತುಟ್ಟಿಭತ್ಯೆಯನ್ನು ಕಾಲಕಾಲಕ್ಕೆ ಕೇಂದ್ರ ಸರಕಾರ ಪರಿಷ್ಕರಿಸುತ್ತದೆ. ಇತರ ಎಲ್ಲಾ ಭತ್ಯೆಗಳನ್ನು ಹಾಲಿ ದರದಲ್ಲಿ ಪಾವತಿಸಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಅದಾಗ್ಯೂ, ಮೂಲವೇತನ ಹೆಚ್ಚಿಸಿದ ಬಳಿಕ ಗವರ್ನರ್ ಮತ್ತು ಉಪಗವರ್ನರ್ ಪಡೆಯುವ ಒಟ್ಟಾರೆ ಸಂಬಳದ ವಿವರವನ್ನು ನೀಡಲಾಗಿಲ್ಲ.