×
Ad

ಉ.ಪ್ರದೇಶ: ಮಾಂಸ ವ್ಯಾಪಾರಿಗಳ ಮುಷ್ಕರ ಅಂತ್ಯ

Update: 2017-04-02 20:25 IST
ಸಾಂದರ್ಭಿಕ ಚಿತ್ರ

ಲಕ್ನೊ, ಎ.2: ಅಕ್ರಮ ಕಸಾಯಿಖಾನೆಗಳ ವಿರುದ್ಧ ಸರಕಾರ ನಡೆಸುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ಉತ್ತರಪ್ರದೇಶದಲ್ಲಿ ಮಾಂಸ ವ್ಯಾಪಾರಿಗಳು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ.

ರಾಜ್ಯ ಸರಕಾರದ ಆಶ್ವಾಸನೆ ಮೇರೆಗೆ ಮುಷ್ಕರ ಹಿಂಪಡೆಯಲಾಗಿದೆ ಎಂದು ‘ಲಕ್ನೊ ಬಕ್ರ ಗೋಶ್ಟ್ ವ್ಯಾಪಾರ ಮಂಡಲ್ ’ನ ಪದಾಧಿಕಾರಿ ಮುಬೀನ್ ಖುರೇಶಿ ತಿಳಿಸಿದ್ದಾರೆ. ವೌಲ್ವಿಗಂಜ್ ಕಸಾಯಿಖಾನೆಯನ್ನು ತೆರೆಯಲು ಹಾಗೂ ಇನ್ನೊಂದು ಕಸಾಯಿಖಾನೆ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಉತ್ತರಪ್ರದೇಶ ಸರಕಾರ ಆಶ್ವಾಸನೆ ನೀಡಿದೆ ಎಂದವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಆದಿತ್ಯನಾಥ್‌ರನ್ನು ಶ್ಲಾಘಿಸಿದ ಅವರು, ಸರಕಾರ ನಮ್ಮ ಅನಿಸಿಕೆ ಮತ್ತು ಬೇಗುದಿಗಳನ್ನು ಮುಕ್ತ ಮನಸ್ಸಿನಿಂದ ಆಲಿಸಿದೆ. ಮಾಂಸದಂಗಡಿಗಳ ಪರವಾನಿಗೆಯನ್ನು ಕಾನೂನಿನ ಚೌಕಟ್ಟಿನಡಿ ನವೀಕರಿಸಲಾಗುವುದು ಎಂದು ಸರಕಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಅಂಗಡಿಗಳನ್ನು ತೆರೆಯಲಿದ್ದು ಮುಂದಿನ 20 ದಿನಗಳೊಳಗೆ ಪರವಾನಿಗೆ ನವೀಕರಣಗೊಳ್ಳುವುದೆಂದು ನಿರೀಕ್ಷಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮಾಂಸದಂಗಡಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂಬ ಸರಕಾರದ ನಿರ್ದೇಶನವನ್ನು ಉಲ್ಲೇಖಿಸಿದ ಅವರು, ಮಾಂಸದಂಗಡಿಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಎಲ್ಲಾ ಅಂಗಡಿ ಮಾಲಕರಿಗೆ ತಿಳಿಸಲಾಗಿದ್ದು ಅವರು ಇದಕ್ಕೆ ಬದ್ಧರಿರುವುದಾಗಿ ತಿಳಿಸಿದ್ದಾರೆ ಎಂದರು. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಾಂಸದಂಗಡಿಗಳು ಮುಷ್ಕರ ನಡೆಸುತ್ತಿದ್ದರೂ ಮೀನು, ಮೊಟ್ಟೆ, ಕೋಳಿ ಮಾಂಸ ಮಾರಾಟದ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಈ ಅಂಗಡಿಗಳಲ್ಲಿ ಹೆಚ್ಚಿನ ವ್ಯಾಪಾರ ನಡೆದಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News