ತರಗತಿಗಳು ಪಠ್ಯಕ್ಕೆ ಸೀಮಿತವಾಗದೆ ಆತ್ಮವಿಶ್ವಾಸ ತುಂಬು ಕೆಲಸ ಮಾಡಲಿ: ದಿವಾಕರ ಶೆಟ್ಟಿ
ಉಡುಪಿ, ಎ.2: ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವ ಕಾರ್ಖಾನೆಗಳಾಗಬಾರದು. ತರಗತಿ ಕೋಣೆಗಳು ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನವನ್ನು ತುಂಬುವುದಕ್ಕಷ್ಟೇ ಸೀಮಿತವಾಗದೆ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ ಹೇಳಿದ್ದಾರೆ.
ಶಿರ್ವ ವಿದ್ಯಾವರ್ಧಕ ಸಂಘದ ಹಿಂದೂ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿನೋದ್ ಮತ್ತು ಚಂದ್ರಶೇಖರ ಶೆಟ್ಟಿ ಕಾಪು ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾದ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ಕಾರ್ಯಗಾರದ ವ್ಯಕ್ತಿತ್ವ ವಿಕಸನದ ತರಬೇತಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ. ಭಾಸ್ಕರ ಶೆಟ್ಟಿ ಮಾತನಾಡಿ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೊಂದಿಗೆ ಪೈಪೋಟಿಯನ್ನು ಎದುರಿಸಲು ಸಮರ್ಥ ರನ್ನಾಗಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರ ದಲ್ಲಿ 9 ಮತ್ತು 10ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ವಿಜ್ಞಾನ, ಗಣಿತ, ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ತರಬೇತಿ ನೀಡಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಫೌಂಡೇಶನ್‌ನ ಟ್ರಸ್ಟಿ ಸೀಮಾ ಹರೀಶ್ ರೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಂದರ ಮೇರ, ಆಂಗ್ಲ ಮಾಧ್ಯ ಶಾಲೆಯ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ನಂಬಿಯಾರ್ ಉಪಸ್ಥಿತರಿದ್ದರು. ಕಾರ್ಯ ಕ್ರಮ ಸಂಯೋಜಕಿ ಶಕಿಲಾ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾ ಧ್ಯಾಯ ಗೋಪಾಲ ಕೃಷ್ಣ ರಾವ್ ವಂದಿಸಿದರು. ಶಿಕ್ಷಕಿಯರಾದ ವಸಂತಿ ಹಾಗೂ ಸುಪ್ರಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.