ಸಚಿವೆಯನ್ನು ಹಿಂಬಾಲಿಸಿದ ಆರೋಪ: ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ
ಹೊಸದಿಲ್ಲಿ, ಎ.3: ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿಯವರ ಕಾರನ್ನು ಶನಿವಾರ ಹಿಂಬಾಲಿಸಿದ ಆರೋಪದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸ್ಮತಿ ಇರಾನಿ ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 354ಡಿ, ಸೆಕ್ಷನ್ 509 ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳಾದ ಅವಿನಾಶ್, ಆನಂದ್, ಕುನಾಲ್ ಹಾಗೂ ಶಿತಾಂಶು ಅವರಿಗೆ ರವಿವಾರ ಜಾಮೀನು ನೀಡಲಾಗಿದೆ. "ದೆಹಲಿ ವಿಮಾನ ನಿಲ್ದಾಣದಿಂದ ಸಂಜೆ 5ರ ಸುಮಾರಿಗೆ ವಾಪಸಾಗುತ್ತಿದ್ದಾಗ, ಮೋತಿಬಾಗ್ ಬಳಿ ಹಳದಿ ನಂಬರ್‌ಪ್ಲೇಟ್ ಹೊಂದಿದ್ದ ಬಿಳಿ ಕಾರಿನಲ್ಲಿದ್ದ ನಾಲ್ವರು ತಡೆದು, ನನ್ನತ್ತ ವಿಧ್ವಂಸಕರ ರೀತಿಯಲ್ಲಿ ಆಗಮಿಸಿದರು" ಎಂದು ಇರಾನಿ ದೂರಿದ್ದರು.
ಕಾರನ್ನು ಬೆನ್ನಟ್ಟುತ್ತಾ ಬಂದ ಈ ನಾಲ್ವರು ನೀಚವಾಗಿ ದಿಟ್ಟಿಸುತ್ತಿದ್ದರು. ಚಾಲಕನಿಗೆ ಸೈರನ್ ಮೊಳಗಿಸುವಂತೆ ಸೂಚಿಸಿದೆ. ಆದರೂ ಅವರು ಸಮೀಪಕ್ಕೆ ಬರುವ ಪ್ರಯತ್ನ ಮಾಡಿದರು ಎಂದು ಹೇಳಿದ್ದರು. ಬಳಿಕ 100 ದೂರವಾಣಿ ಸಂಖ್ಯೆಗೆ ದೂರು ನೀಡಿದ ತಕ್ಷಣ ಫ್ರೆಂಚ್ ದೂತಾವಾಸದ ಬಳಿ ಅವರನ್ನು ತಡೆಯಲಾಯಿತು. ಇರಾನಿ ಚಾಣಕ್ಯಪುರಿ ಠಾಣೆಗೆ ಬಂದು ಪ್ರಕರಣದ ವಿವರ ನೀಡಿದರು. ನಾಲ್ವರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಅಮಲಿನಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮದ್ಯ ಸೇವಿಸಿ, ವಿಹಾರಕ್ಕಾಗಿ ಕಾರು ಚಲಾಯಿಸುತ್ತಿದ್ದೆವು. ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಸಲುವಾಗಿ ಕಾರಿನಲ್ಲಿ ವೀಡಿಯೊ ಮಾಡುತ್ತಿದ್ದರು. ಸಚಿವೆಯ ಕಾರನ್ನು ಬೆನ್ನಟ್ಟುವ ಉದ್ದೇಶ ಇರಲಿಲ್ಲ; ಎಲ್ಲಕ್ಕಿಂತ ಹೆಚ್ಚಾಗಿ ಅದು ಸಚಿವೆಯ ಕಾರು ಎನ್ನುವುದೂ ತಿಳಿದಿರಲಿಲ್ಲ ಎಂದು ವಿದ್ಯಾರ್ಥಿಗಳು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.