ಗುಜರಾತ್ ಗೋಹತ್ಯೆ ನಿಷೇಧ ಕಾನೂನು: ನೂರಾರು ಪ್ರಕರಣ, ಒಬ್ಬನಿಗೆ ಮಾತ್ರ ಶಿಕ್ಷೆ !
ಅಹ್ಮದಾಬಾದ್, ಎ.3: ಗುಜರಾತ್‌ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2011ರಲ್ಲಿ ಗುಜರಾತ್ ಪ್ರಾಣಿ ಸಂರಕ್ಷಣೆ ಕಾಯ್ದೆ- 1954ಕ್ಕೆ ತಿದ್ದುಪಡಿ ತಂದು ಗೋಹತ್ಯೆ, ಗೋಮಾಂಸ ಮಾರಾಟ ಹಾಗೂ ಸಾಗಾಟ ನಿಷೇಧ ಜಾರಿಗೊಳಿಸಿದ ಬಳಿಕ ಈ ಕಾಯ್ದೆಯಡಿ ಕೇವಲ ಒಬ್ಬನಿಗೆ ಮಾತ್ರ ಶಿಕ್ಷೆಯಾಗಿದೆ!
2016ರ ಮೇ 8ರಂದು ನವಸಾರಿ ಜಿಲ್ಲೆಯ ಗಂದೇವಿ ತಾಲೂಕಿನ ರಫೀಕ್ ಖಲೀಫಾ (35) ಎಂಬ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಈ ಕಾಯ್ದೆಯಡಿ ಸ್ಥಳೀಯ ನ್ಯಾಯಾಲಯ ವಿಧಿಸಿತ್ತು. ಅದು ಗೋಮಾಂಸ ಹೊಂದಿದ್ದ ಕಾರಣಕ್ಕಾಗಿ. ಸಾರ್ವಜನಿಕ ಅಭಿಯೋಜಕರ ಪ್ರಕಾರ, 2011ರಲ್ಲಿ ಕಾಯ್ದೆಗೆ ತಿದ್ದುಪಡಿಯಾದ ಬಳಿಕ ಈ ಕಾಯ್ದೆಯಡಿ ಪ್ರಕಟವಾದ ಮೊದಲ ಶಿಕ್ಷೆ ಇದು.
ಕಳೆದ ಶುಕ್ರವಾರ ಗುಜರಾತ್ ವಿಧಾನಸಭೆ, ಈ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿ ತಿದ್ದುಪಡಿ ತಂದಿದೆ. ಇದೀಗ ಕಾಯ್ದೆ ಉಲ್ಲಂಘಿಸಿದವರಿಗೆ ಕನಿಷ್ಠ 10 ವರ್ಷ ಜೈಲು ಶಿಕ್ಷೆಯಿಂದ ಹಿಡಿದು ಜೀವಾವಧಿವರೆಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ಕಾನೂನುಬಾಹಿರವಾಗಿ ಹಸು, ಗೋಮಾಂಸ ಅಥವಾ ಗೋಮಾಂಸದ ಉತ್ಪನ್ನಗಳನ್ನು ಸಾಗಾಟ ಮಾಡುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಖಲೀಫಾ ಅವರ ವಿರುದ್ಧ 2014ರ ಅಕ್ಟೋಬರ್ 8ರಂದು ಗ್ರಾಮದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಪ್ರಕರಣ ದಾಖಲಾಗಿತ್ತು. ಪಂಚಮಹಲ್ ಜಿಲ್ಲೆಯಲ್ಲೇ 87 ಪ್ರಕರಣಗಳು ಈ ಕಾಯ್ದೆಯಡಿ ಕಳೆದ ವರ್ಷ ದಾಖಲಾಗಿವೆ. ಆನಂದ್ ಜಿಲ್ಲೆಯಲ್ಲಿ 30 ಪ್ರಕರಣಗಳು ದಾಖಲಾಗಿವೆ. ಆದರೆ ಒಂದೇ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು, ಬಹುತೇಕ ಪ್ರಕರಣಗಳು ಸುಳ್ಳು ಎನ್ನುವುದನ್ನು ಸಾಬೀತುಪಡಿಸಿದಂತಾಗಿದೆ.