×
Ad

ಸಿಹಿ ಸಕ್ಕರೆಯ ಅತ್ಯಂತ ಕಹಿ ಸುದ್ದಿ ಏನು ಗೊತ್ತೇ?

Update: 2017-04-03 09:28 IST

ಮುಂಬೈ, ಎ.3: ದೇಶದ ಕೃಷಿಕ್ಷೇತ್ರ 2015ರ ಭೀಕರ ಬರದಿಂದ ಚೇತರಿಸಿಕೊಳ್ಳುತ್ತಿದ್ದರೂ, ಸಕ್ಕರೆ ಉದ್ಯಮದ ಮೇಲೆ ಮಾತ್ರ ಬರದ ಕರಾಳ ಛಾಯೆ ಮುಂದುವರಿದಿದೆ. ಸಕ್ಕರೆ ಉತ್ಪಾದನೆ ಗಣನೀಯವಾಗಿ ಕುಸಿದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಸಕ್ಕರೆ ತುಟ್ಟಿಯಾಗುವ ಎಲ್ಲ ಸಾಧ್ಯತೆಗಳಿವೆ.

2016-17ನೆ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಳೆದ ಹತ್ತು ವರ್ಷಗಳಲ್ಲೇ ಕನಿಷ್ಠ ಸಕ್ಕರೆ ಉತ್ಪಾದನೆಯಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 147 ಸಕ್ಕರೆ ಕಾರ್ಖಾನೆಗಳು 371.4 ಲಕ್ಷ ಟನ್ ಕಬ್ಬು ಅರೆದಿದ್ದು, 417 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಇದು 2008ರಲ್ಲಿ ಉತ್ಪಾದನೆಯಾದ ಸಕ್ಕರೆಗಿಂತಲೂ ಕಡಿಮೆ.

ಸಕ್ಕರೆ ಉತ್ಪಾದನೆ ಕುಂಠಿತವಾಗಿರುವುದರಿಂದ ಬೆಲೆ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಹಾರಾಷ್ಟ್ರ, ದೇಶದಲ್ಲೇ ಅತ್ಯಧಿಕ ಸಕ್ಕರೆ ಉತ್ಪಾದಿಸುವ ರಾಜ್ಯ.

"ಇದು ಅತ್ಯಂತ ಕ್ಲಿಷ್ಟಕರ ವರ್ಷವಾಗಿದ್ದು, ನಷ್ಟ ಹೆಚ್ಚುತ್ತಿದೆ. ಮುಂದಿನ ವರ್ಷಗಳಲ್ಲಿ ಇದರ ಪರಿಣಾಮ ಇನ್ನಷ್ಟು ತೀವ್ರವಾಗಲಿದೆ" ಎಂದು ರಾಜ್ಯ ಸಕ್ಕರೆ ಕಾರ್ಖಾನೆಗಳ ಸಂಘದ ಹಿರಿಯ ಅಧಿಕಾರಿ ಹೇಳಿದ್ದಾರೆ. ಇದರಿಂದಾಗಿ 32-34 ರೂಪಾಯಿಯಷ್ಟಿರುವ ಸಕ್ಕರೆ ಬೆಲೆ 38-40 ರೂಪಾಯಿಗೆ ಹೆಚ್ಚಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಬ್ಬು ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದ್ದು, ಕಡಿಮೆ ಉತ್ಪಾದನೆಯಿಂದಾಗಿ ಸುಮಾರು 6 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. 2015-16ರಲ್ಲಿ ಬರಗಾಲದ ಪರಿಣಾಮವಾಗಿ ಕಬ್ಬು ಬೆಳೆ 10.3 ಲಕ್ಷ ಹೆಕ್ಟೇರ್‌ನಿಂದ 6.3 ಲಕ್ಷ ಹೆಕ್ಟೇರ್‌ಗೆ ಇಳಿದಿದೆ. ಇದರಿಂದಾಗಿ 2015ರಲ್ಲಿ 7.3 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿದ್ದರೆ, 2016ರಲ್ಲಿ ಈ ಪ್ರಮಾಣ 4.5 ಲಕ್ಷ ಟನ್‌ಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News