ನಡಾಲ್‌ಗೆ ಸೋಲುಣಿಸಿದ ಫೆಡರರ್‌ಗೆ ಮಿಯಾಮಿ ಓಪನ್ ಟ್ರೋಫಿ
Update: 2017-04-03 10:34 IST
ಮಿಯಾಮಿ,ಎ.3: ದೀರ್ಘಕಾಲದ ಎದುರಾಳಿ ರಫೆಲ್ ನಡಾಲ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಮಿಯಾಮಿ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಟ್ರೋಫಿ ಎತ್ತಿ ಹಿಡಿದರು.
ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಫೆಡರರ್ ಅವರು ನಡಾಲ್‌ರನ್ನು 6-3, 6-4 ನೇರ ಸೆಟ್‌ಗಳ ಅಂತರದಿಂದ ಸದೆಬಡಿದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಇಂಡಿಯನ್ ವೆಲ್ಸ್ ಪ್ರಶಸ್ತಿಯನ್ನು ಜಯಿಸಿರುವ 35ರ ಹರೆಯದ ಫೆಡರರ್ ಮತ್ತೊಮ್ಮೆ ಎಟಿಪಿ ಟೂರ್‌ನಲ್ಲಿ ಪ್ರಾಬಲ್ಯ ಮೆರೆದರು.
ಫೆಡರರ್ ಈ ವರ್ಷ ನಡಾಲ್ ವಿರುದ್ಧ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಜಯಿಸಿದ್ದಾರೆ. ನಡಾಲ್ ಐದನೆ ಬಾರಿ ಮಿಯಾಮಿ ಓಪನ್ ಫೈನಲ್‌ನಲ್ಲಿ ಆಡಿದ್ದರೂ ಪ್ರಶಸ್ತಿ ಗೆಲ್ಲಲು ಮತ್ತೊಮ್ಮೆ ವಿಫಲರಾದರು.