×
Ad

ಪಾಕ್‌ಗೆ ಟ್ವೆಂಟಿ-20 ಸರಣಿ

Update: 2017-04-03 11:09 IST

ಪೋರ್ಟ್ ಆಫ್ ಸ್ಪೇನ್, ಎ.3: ಆರಂಭಿಕ ಬ್ಯಾಟ್ಸ್‌ಮನ್ ಅಹ್ಮದ್ ಶೆಹ್‌ಝಾದ್ ಹಾಗೂ ಬೌಲರ್‌ಗಳ ಸಾಹಸದ ನೆರವಿನಿಂದ ನಾಲ್ಕನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿದ ಪಾಕಿಸ್ತಾನ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.

ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ರವಿವಾರ ನಡೆದ ನಾಲ್ಕನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲ್ಲಲು 125 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಶೆಹ್‌ಝಾದ್(53) ಹಾಗೂ ಬಾಬರ್ ಆಝಂ(38) ಎರಡನೆ ವಿಕೆಟ್‌ಗೆ ಸೇರಿಸಿದ 70 ರನ್ ಜೊತೆಯಾಟದ ಬೆಂಬಲದಿಂದ ಸುಲಭ ಜಯ ಸಾಧಿಸಿತು. ಶೆಹಝಾದ್ ಹಾಗೂ ಕಮ್ರಾನ್ ಅಕ್ಮಲ್(20) ಮೊದಲ ವಿಕೆಟ್‌ಗೆ 40 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು.

ಶೆಹ್‌ಝಾದ್(53, 45 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಬಾಬರ್(38, 36 ಎಸೆತ, 1 ಬೌಂಡರಿ, 1 ಸಿಕ್ಸರ್)  ಒಟ್ಟಿಗೆ ಔಟಾದಾಗ ಶುಐಬ್ ಮಲಿಕ್(9) ಹಾಗೂ ನಾಯಕ ಸರ್ಫರಾಝ್ ಅಹ್ಮದ್(3) ಒಂದು ಓವರ್ ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೆ ಮೊದಲು ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಪಾಕ್ ಬೌಲರ್‌ಗಳು ವಿಶ್ವ ಚಾಂಪಿಯನ್ ವಿಂಡೀಸ್ ತಂಡವನ್ನು 8 ವಿಕೆಟ್‌ಗಳ ನಷ್ಟಕ್ಕೆ 124 ರನ್‌ಗೆ ನಿಯಂತ್ರಿಸಲು ಯಶಸ್ವಿಯಾದರು. ಒಂದು ಹಂತದಲ್ಲಿ 83 ರನ್‌ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವಿಂಡೀಸ್ ಪರ ನಾಯಕ ಕಾರ್ಲಸ್ ಬ್ರಾತ್‌ವೇಟ್(ಅಜೇಯ 37) ಏಕಾಂಗಿ ಹೋರಾಟ ನೀಡಿದರೂ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಲು ವಿಫಲರಾದರು.

  ಹಸನ್ ಅಲಿ(2-12) ಹಾಗೂ ರುಮಾನ್ ರಯಿಸ್(1-25) ಕರಾರುವಾಕ್ ಹಾಗೂ ಶಿಸ್ತುಬದ್ಧ ಬೌಲಿಂಗ್‌ನ ಮೂಲಕ ಒಟ್ಟಿಗೆ 3 ಪ್ರಮುಖ ವಿಕೆಟ್ ಉಡಾಯಿಸಿದರು. ಈ ಇಬ್ಬರು ಬೌಲರ್‌ಗಳು ಮೂರು ಮೇಡನ್ ಓವರ್ ಎಸೆದು ಗಮನ ಸೆಳೆದರು. ಪಾಕ್ ಇದೇ ಮೊದಲ ಬಾರಿ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಈ ಸಾಧನೆ ಮಾಡಿದೆ.

ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಲೆಗ್-ಸ್ಪಿನ್ನರ್ ಶಾದಾಬ್‌ಖಾನ್ ವಿಂಡೀಸ್‌ನ ಅಗ್ರ ಸ್ಕೋರರ್ ಚಾಡ್ವಿಕ್ ವಾಲ್ಟನ್(40) ಸಹಿತ 4 ಓವರ್‌ಗಳಲ್ಲಿ 16 ರನ್‌ಗೆ 2 ವಿಕೆಟ್‌ಗಳನ್ನು ಉರುಳಿಸಿದರು.

ಸರಣಿಯಲ್ಲಿ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದ ಶಾದಾಬ್ ಖಾನ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. 2 ಮೇಡನ್ ಓವರ್ ಸಹಿತ ಕೇವಲ 12 ರನ್‌ಗೆ 2 ವಿಕೆಟ್ ಪಡೆದ ಹಸನ್ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News