ಜರ್ಮನಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಇಬ್ಬರು ದುಷ್ಕರ್ಮಿಗಳ ಬಂಧನ
ಚೆನ್ನೈ, ಎ.3: ತಮಿಳುನಾಡಿನ ಬೀಚ್‌ನಲ್ಲಿ ಜರ್ಮನಿ ಮಹಿಳೆಯೊಬ್ಬರನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚೆನ್ನೈನಿಂದ 60 ಕಿ.ಮೀ. ದೂರದಲ್ಲಿರುವ ಮಲ್ಲಪ್ಪುರಂ ಬೀಚ್‌ನಲ್ಲಿ ಭಾರತದ ಮೂವರು ವ್ಯಕ್ತಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದರು ಎಂದು 24ರ ಹರೆಯದ ಜರ್ಮನಿ ಮಹಿಳೆ ಆರೋಪಿಸಿದ್ದರು. ಇತರ ಐವರು ಪ್ರವಾಸಿಗರೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಜರ್ಮನಿ ಮಹಿಳೆಯನ್ನು ಚೆಂಗಲ್‌ಪೇಟ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಪ್ರವಾಸಿಗರ ಗುಂಪಿನಿಂದ ದೂರ ಉಳಿದಿದ್ದ ಜರ್ಮನಿ ಮಹಿಳೆ ಕಾಂಚೀಪುರಂ ಜಿಲ್ಲೆಯಲ್ಲಿ ಮಲ್ಲಪ್ಪುರಂನ ಖಾಸಗಿ ರೆಸಾರ್ಟ್‌ನ ಬೀಚ್‌ನಲ್ಲಿ ಒಂಟಿಯಾಗಿದ್ದರು. ಸನ್‌ಬಾತ್ ಮಾಡುತ್ತಾ ನಿದ್ದೆಹೋಗಿದ್ದ ಜರ್ಮನಿ ಮಹಿಳೆಯ ಮೇಲೆ ಭಾರತದ ಮೂವರು ಕಿರಾತಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಕಾಮುಕರನ್ನು ಬಂಧಿಸಲು ನಾಲ್ಕು ವಿಶೇಷ ತಂಡವನ್ನು ರಚಿಸಲಾಗಿದ್ದು, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿದಿದೆ.
ಭಾರತೀಯ ಪೊಲೀಸರು ವೃತ್ತಿಪರರಾಗಿದ್ದು, ಸಹಾಯ ಮಾಡುವ ಗುಣವಿದೆ ಎಂದು ಖಾಸಗಿ ಟಿವಿ ಚಾನಲ್‌ಗೆ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.