×
Ad

ಮಧ್ಯಪ್ರದೇಶದಲ್ಲಿ ಪತ್ತೆಯಾದ ದೋಷಪೂರ್ಣ ಮತಯಂತ್ರ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಳಕೆಯಾಗಿತ್ತು !

Update: 2017-04-03 13:10 IST

ಭೋಪಾಲ್, ಎ.3: ಭಿಂಡ್ ಎಂಬಲ್ಲಿ ಡಮ್ಮಿ ಟೆಸ್ಟ್ ಸಂದರ್ಭ ಬಿಜೆಪಿ ವೋಟರ್ ಸ್ಲಿಪ್ಪುಗಳನ್ನು ಹೊರಗೆಡಹಿ ದೇಶದಾದ್ಯಂತ ವಿವಾದಕ್ಕೆ ಕಾರಣವಾದ ದೋಷಪೂರ್ಣ ಮತಯಂತ್ರವು ಉತ್ತರ ಪ್ರದೇಶದ ಕಾನ್ಪುರದಲ್ಲಿನ ವಿಧಾನಸಭೆ ಚುನಾವಣೆ ಸಂದರ್ಭ ಬಳಕೆಯಾದ ನಂತರ ಇಲ್ಲಿಗೆ ಬಂದಿತ್ತೆಂದು ಅದನ್ನು ಪರೀಕ್ಷಿಸಿದ ಚುನಾವಣಾ ಆಯೋಗದ ತಂಡ ಹೇಳಿದೆ.

ರವಿವಾರ ಇಲ್ಲಿಗೆ ಆಗಮಿಸಿದ ಆಯೋಗದ ಐದು ಸದಸ್ಯರ ತಂಡವು ಮತಯಂತ್ರವನ್ನು ಪರೀಕ್ಷೆಗೊಳಪಡಿಸಿ ಅದು ದೋಷಪೂರ್ಣವಾಗಿದೆ ಎಂದು ಹೇಳಿತ್ತು. ಈ ಘಟನೆ ಈಗಾಗಲೇ ಭಿಂಡ್ ಕಲೆಕ್ಟರ್ ಇಳಯರಾಜ ಟಿ, ಎಸ್ಪಿ ಅನಿಲ್ ಸಿಂಗ್ ಕುಶ್ವಹ ಹಾಗೂ ಎಸ್‌ಡಿಒಪಿ ಇಂದ್ರವೀರ್ ಸಿಂಗ್ ಅವರ ತಲೆದಂಡ ಪಡೆದಿದೆಯಲ್ಲದೆ 19 ಮಂದಿ ಇತರ ಅಧಿಕಾರಿಗಳು ತನಿಖೆ ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಚುನಾವಣೆ ನಡೆದ ಉತ್ತರ ಪ್ರದೇಶದ ಕಾನ್ಪುರದಿಂದ ಕಳುಹಿಸಲಾದ 300 ಮತಯಂತ್ರಗಳ ಪೈಕಿ ಇದು ಒಂದಾಗಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಫಲಿತಾಂಶಗಳು ಘೋಷಣೆಯಾಗಿ 20 ದಿನಗಳೊಳಗೆ ಈ ಮತಯಂತ್ರಗಳು ಮಧ್ಯಪ್ರದೇಶವನ್ನು ಹೇಗೆ ತಲುಪಿವೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಎಎಪಿ ರವಿವಾರ ಪ್ರತಿಭಟನೆಯನ್ನೂ ನಡೆಸಿ ಮುಖ್ಯ ಚುನಾವಣಾಧಿಕಾರಿಯನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂದೂ ಆಗ್ರಹಿಸಿದವು.

ಮುಖ್ಯ ಚುನಾವಣಾಧಿಕಾರಿ ಮತಯಂತ್ರಗಳನ್ನು ಪತ್ರಕರ್ತರ ಮುಂದೆ ಪ್ರದರ್ಶಿಸಿ ಅದರ ವಿವಿಧ ಗುಂಡಿಗಳನ್ನೊತ್ತಿದಾಗ ಬಿಜೆಪಿ ಸ್ಲಿಪ್ಪುಗಳು ಹೊರಬಂದ ವೀಡಿಯೋ ವೈರಲ್ ಆಗಿತ್ತು. ಆದರೆ ಮತಯಂತ್ರಗಳನ್ನು ದುರುಪಯೋಗ ಪಡಿಸಲು ಸಾಧ್ಯವಿಲ್ಲ, ಈ ಮತಯಂತ್ರದಿಂದ ನಂತರ ಕಾಂಗ್ರೆಸ್ ಸ್ಲಿಪ್ಪುಗಳೂ ಹೊರಬಂದಿದ್ದವೆಂದು ಅವರು ಸಮಜಾಯಿಷಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News