ಬೃಹತ್ ಹೆಬ್ಬಾವನ್ನು ಗುಂಡಿಕ್ಕಿ ಕೊಂದು, ತುಂಡು ತುಂಡು ಮಾಡಿ ಹೂತರು...!
ಪುಣೆ, ಎ.3: ಮುಲ್ಸಿಯಲ್ಲಿರುವ ಆಂಬೈ ವ್ಯಾಲಿ ಸಿಟಿಯಲ್ಲಿ ಹೆಬ್ಬಾವೊಂದನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಪುಣೆ ಮೂಲದ ಪ್ರಾಣಿ ಸಂರಕ್ಷಕರೊಬ್ಬರರು ನೀಡಿದ ಮಾಹಿತಿಯನ್ವಯ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ವಿಚಿತ್ರ ಘಟನೆಯೊಂದನ್ನು ಬಹಿರಂಗಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಬೈ ವ್ಯಾಲಿ ಸಿಟಿಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಇತರ ಉದ್ಯೋಗಿಗಳು ಹೆಬ್ಬಾವನ್ನು ತುಂಡು ತುಂಡಾಗಿಸಿ ಹತ್ತಿರದ ವಾಲಿಬಾಲ್ ಮೈದಾನವೊಂದರಲ್ಲಿ ಹೂತಿದ್ದಾರೆಂದು ಕಂಡುಕೊಂಡಿದ್ದರು. ಹೆಬ್ಬಾವು ಎಷ್ಟೊಂದು ದೊಡ್ಡದಾಗಿತ್ತೆಂದರೆ ಅದನ್ನು ಹಿಡಿಯುವುದು ಕಷ್ಟಕರವಾಗಿತ್ತು. ಇಡೀ ಘಟನೆಯ ವೀಡಿಯೋ ದೃಶ್ಯಾವಳಿಯನ್ನೂ ಸೆರೆ ಹಿಡಿಯಲಾಗಿದೆ.
ಈ ವೀಡಿಯೋವನ್ನು ನೋಡಿದ ನೀಲೇಶ್ ಗರ್ಡೆ ಎಂಬವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅಲ್ಲಿಗೆ ಧಾವಿಸಿದ್ದ ಅರಣ್ಯಾಧಿಕಾರಿಗಳು ನೆಲವನ್ನು ಅಗೆದು ಅಲ್ಲಿದ್ದ ಹೆಬ್ಬಾವಿನ ಅವಶೇಷಗಳನ್ನು ವಶ ಪಡಿಸಿಕೊಂಡು ಅಲ್ಲಿನ ಉದ್ಯೋಗಿಗಳಾದ ಕಬೀರ್ ಸುಬೇದಾರ್ ಎಂಬ ಭದ್ರತಾ ಮುಖ್ಯಸ್ಥ, ಧ್ಯಾನೇಶ್ವರ್ ತೊಡ್ಮಲ್, ಕೆ ಪಿ ರಾಮಚಂದ್ರ, ಚಂದನ್ ರಾಮಚೆರ್ರಿ ಹಾಗೂ ಶಾನ್ದಾರ್ ಜಾಧವ್ ಅವರನ್ನು ವನ್ಯಪ್ರಾಣಿ ಸಂರಕ್ಷಣಾ ಕಾಯಿದೆ 1972 ಅನ್ವಯ ಬಂಧಿಸಿದ್ದಾರೆ. ಹೆಬ್ಬಾವನ್ನು ಕೊಲ್ಲಲು ಉಪಯೋಗಿಸಿದ ಅಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ