ಡಿಸಿ, ಎಸಿ, ವಿಎ ಕೊಲೆಯತ್ನ ಪ್ರಕರಣಕ್ಕೆ ಆಕ್ರೋಶ: ಸರಕಾರಿ ನೌಕರರಿಂದ ನಾಳೆ ಒಂದು ದಿನದ ಪ್ರತಿಭಟನೆಗೆ ನಿರ್ಧಾರ
ಉಡುಪಿ, ಎ.3: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಅಂಪಾರು ಗ್ರಾಮ ಲೆಕ್ಕಿಗ ಕಾಂತರಾಜು ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಅಕ್ರಮ ಮರಳು ಮಾಫಿಯಾದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ನೌಕರರ ವಿವಿಧ ಸಂಘಟನೆಗಳು ನಾಳೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಎದುರು ಒಂದು ದಿನದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದವು.
ರವಿವಾರ ಮಧ್ಯರಾತ್ರಿ ವೇಳೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಕುಂದಾಪುರ ತಾಲೂಕಿನ ಅಕ್ರಮ ಮರಳುಗಾರಿಕೆ ತಾಣಗಳಿಗೆ ದಾಳಿ ನಡೆಸಿದ ವೇಳೆ ನಡೆದ ಘಟನೆಯ ಕುರಿತಂತೆ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಸಭೆ ಸೇರಿದ ಜಿಲ್ಲೆಯ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಸಮಸ್ತ ನೌಕರರು ಘಟನೆಯನ್ನು ತೀವ್ರವಾಗಿ ಖಂಡಿಸಿದರಲ್ಲದೇ, ಘಟನೆ ಕುರಿತ ನಮ್ಮ ಆಕ್ರೋಶವನ್ನು ವಿಧಾನಸೌಧದವರೆಗೆ ಮುಟ್ಟಿಸುವ ಅಗತ್ಯವಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಅವರು, ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅತ್ಯಂತ ದು:ಖಕರ ಘಟನೆ. ಸರಕಾರಿ ನೌಕರರ ಮೇಲೆ ಅದರಲ್ಲೂ ಕಂದಾಯ ಇಲಾಖೆಯ ಸಿಬ್ಬಂದಿಗಳ ಮೇಲೆ ಇಂಥ ಕೃತ್ಯ ಪದೇ ಪದೇ ನಡೆಯುತ್ತಿದೆ. ಆದುದರಿಂದ ನಾವು ಒಗ್ಗಟ್ಟಾಗಿ ನಿಂತು ಇಂಥ ಕೃತ್ಯಗಳನ್ನು ಖಂಡಿಸಿ, ನಮ್ಮ ಧ್ವನಿಯನ್ನು ವಿಧಾನಸೌಧದವರೆಗೂ ಕೇಳುವಂತೆ ಮಾಡಬೇಕು ಎಂದರು.
ರಜೆ ಹಾಕಿ ಪ್ರತಿಭಟನೆ: ಇದಕ್ಕಾಗಿ ಕೇವಲ ಕಂದಾಯ ಇಲಾಖೆಯವರು ಮಾತ್ರವಲ್ಲ ಜಿಲ್ಲೆಯ ಸಮಸ್ತ ಸರಕಾರಿ ನೌಕರರು ಒಂದು ದಿನ ರಜೆ ಹಾಕಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಇದಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಸಾರಿದರು. ಚರ್ಚೆಯ ಬಳಿಕ ನಾಳೆಯೇ ಪ್ರತಿಯೊಬ್ಬ ಸರಕಾರಿ ನೌಕರರು ಒಂದು ದಿನದ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದೆಂದು ಸರ್ವಾನುಮತ ದಿಂದ ನಿರ್ಧರಿಸಲಾಯಿತು.
ಭೂಮಾಪಕರ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುನಿಲ್ ನಟೇಕರ್ ಅವರು ಮಾತನಾಡಿ, ಹಲ್ಲೆಯನ್ನು ಎಲ್ಲರೂ ಒಕ್ಕೊರಳಿನಿಂದ ಖಂಡಿಸಬೇಕು. ಅಲ್ಲದೇ ಹಲ್ಲೆಕೋರರು ಹಾಗೂ ಅವರ ಹಿಂದಿರುವ ಶಕ್ತಿಗಳು ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೆ ಹೋರಾಟವನ್ನು ಮುಂದುವರಿಸಬೇಕು ಎಂದರು.
ಸಭೆಯಲ್ಲಿ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಕುಂದಾಪುರದ ತಹಶೀಲ್ದಾರ್ ಜಿ.ಎಂ.ಬೋರ್ಕರ್, ಬ್ರಹ್ಮಾವರದ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ಜಿಲ್ಲಾ ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶೌಕತುಲ್ಲಾ ಅಸ್ಸಾದಿ, ಉಡುಪಿ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಸುನಿಲ್, ಗ್ರಾಮ ಸಹಾಯಕರ ಸಂಘದ ಗೌರವಾಧ್ಯಕ್ಷ ಸುಧಾಕರ್, ಜಿಲ್ಲಾ ಕಂದಾಯ ನೌಕರರ ಸಂಘದ ಉಪಾದ್ಯಕ್ಷ ರವಿಶಂಕರ್, ಕಾರ್ಯದರ್ಶಿ ವಿಶ್ವನಾಥ್, ಕಾರ್ಕಳ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಶಿವಪ್ರಸಾದ್, ಕಾರ್ಕಳ ತಾಲೂಕು ಕಂದಾಯ ನೌಕರರ ಸಂಘದ ಕಾರ್ಯದರ್ಶಿ ಕಿಶೋರ್, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.
ಸದಾ ಅಪಾಯ ಎದುರಿಸುತ್ತಾ ಕರ್ತವ್ಯ ನಿರ್ವಹಣೆ:
ಕುಂದಾಪುರ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿದ್ದು, ಸಾರ್ವಜನಿಕರಿಂದ ಸದಾ ದೂರುಗಳು ಬರುತ್ತಾ ಇರುತ್ತವೆ. ಕುಂದಾಪುರದ ತಹಶೀಲ್ದಾರ್‌ನಾಗಿ ಕಳೆದ ಎಂಟು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ನಾನು ಇಂಥ ಹಲವು ಘಟನೆಗಳನ್ನು ಕಂಡಿದ್ದೇನೆ, ಕೇಳಿದ್ದೇನೆ ಮತ್ತು ಸ್ವತಹ ಅನುಭವಿಸಿದ್ದೇನೆ ಎಂದು ಕುಂದಾಪುರದ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಘಟನೆಯನ್ನು ವಿವರಿಸುತ್ತಾ ನುಡಿದರು.
ಮರಳು ಗಣಿಗಾರಿಕೆಯಲ್ಲಿ ಸುಮಾರು ಏಳು ಇಲಾಖೆಗಳು ಬರುತ್ತವೆ. ಕಂದಾಯ, ಭೂವಿಜ್ಞಾನ ಮತ್ತು ಗಣಿಗಾರಿಕೆ, ಪೊಲೀಸ್ ಹೀಗೆ. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿದರೆ ಸರಿ. ಇಲ್ಲದಿದ್ದರೆ ಸ್ಥಳಕ್ಕೆ ತೆರಳುವ ಕಂದಾಯ ಅಧಿಕಾರಿಗಳು, ನೌಕರರು ಸದಾ ಅಪಾಯಕ್ಕೆ ಸಿಲುಕುತ್ತೇವೆ ಎಂದರು.
ರವಿವಾರ ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ಎಸಿ ದೂರವಾಣಿ ಕರೆ ಮಾಡಿ, ಹಟ್ಟಿಕುದ್ರುನಲ್ಲಿ ಅಕ್ರಮ ಮರಳು ತೆಗೆಯುವ ದೂರು ಬಂದಿದೆ ಹೋಗಿ ನೋಡಿ ಎಂದರು.
ನಾನು ಅಂಪಾರಿನ ವಿಎ ಕಾಂತರಾಜು ಅವರನ್ನು ಕರೆದುಕೊಂಡು ಹಟ್ಟಿಕುದ್ರು ಬದಲು ಸಬ್ಲಾಡಿ ಹೋಗಿದ್ದು, ಅಲ್ಲಿದ್ದ ಲಾರಿಯನ್ನು ಜಪ್ತಿ ಮಾಡಿ ಪೊಲೀಸರಿಗೆ ವಶಪಡಿಸಿಕೊಳ್ಳಲು ಸೂಚಿಸಿದಾಗ ಕುಂದಾಪುರ ಠಾಣೆಗೆ ಬರುವಂತೆ ಜಿಲ್ಲಾಧಿಕಾರಿಯಿಂದ ಕರೆ ಬಂತು. ನಾವು ಅಲ್ಲಿಗೆ ಹೋದ ಕೆಲ ಹೊತ್ತಲ್ಲಿ ಡಿಸಿ, ಎಸಿಯವರು ಆರು ಮಂದಿಯನ್ನು ಕರೆತಂದು ಪೊಲೀಸರಿಗೆ ಒಪ್ಪಿಸಿದರು. ಕೇಸು ದಾಖಲಾಗುವಂತೆ ನೋಡಿಕೊಳ್ಳುವಂತೆ ತನಗೆ ತಿಳಿಸಿ ಅವರು ಕಾಂತರಾಜುವನ್ನು ಕರೆದುಕೊಂಡು ಕಂಡ್ಲೂರಿನತ್ತ ತೆರಳಿದರು ಎಂದರು.