×
Ad

ಮಿಯಾಮಿ ಓಪನ್: ಸಾನಿಯಾ-ಸ್ಟ್ರೈಕೊವಾಗೆ ದ್ವಿತೀಯ ಸ್ಥಾನ

Update: 2017-04-03 14:38 IST

ಮಿಯಾಮಿ,ಎ.3: ಭಾರತದ ಸಾನಿಯಾ ಮಿರ್ಝಾ ಹಾಗೂ ಬಾರ್ಬೊರ ಸ್ಟ್ರೈಕೊವಾ ಜೋಡಿ ಮಿಯಾಮಿ ಓಪನ್‌ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

 ರವಿವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಡೋ-ಝಕ್ ಜೋಡಿ ಸಾನಿಯಾ-ಸ್ಟ್ರೈಕೊವಾ ಶ್ರೇಯಾಂಕರಹಿತ ಗಾಬ್ರಿಯೆಲಾ ಡಾಬ್ರೊವ್‌ಸ್ಕಿ ಹಾಗೂ ಕ್ಯೂ ಯಿಫಾನ್ ವಿರುದ್ಧ 6-4, 6-3 ನೇರ ಸೆಟ್‌ಗಳ ಅಂತರದಿಂದ ಶರಣಾಗಿ ಪ್ರಶಸ್ತಿ ಜಯಿಸುವ ಸುವರ್ಣಾವಕಾಶ ಕಳೆದುಕೊಂಡರು.

ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ರನ್ನರ್ಸ್‌-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಸಾನಿಯಾ ಹಾಗೂ ಸ್ಟ್ರೈಕೊವಾ ಈ ವರ್ಷ 2ನೆ ಬಾರಿ ಫೈನಲ್‌ಗೆ ತಲುಪಿದ್ದರು. ಬ್ರಿಸ್ಬೇನ್‌ನಲ್ಲಿ ಅಮೆರಿಕದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದ ಸಾನಿಯಾ-ಸ್ಟ್ರೈಕೋವಾ ಈ ವರ್ಷ 2ನೆ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು.

ಸೆಮಿ ಫೈನಲ್‌ನಲ್ಲಿ ಮಾರ್ಟಿನಾ ಹಿಂಗಿಸ್ ಹಾಗೂ ಚಾನ್ ಯುಂಗ್-ಜಾನ್‌ರನ್ನು 6-7, 6-1, 10-4 ಸೆಟ್‌ಗಳ ಅಂತರದಿಂದ ಮಣಿಸಿದ್ದ ಸಾನಿಯಾ ಹಾಗೂ ಸ್ಟ್ರೈಕೊವಾ ಫೈನಲ್‌ಗೆ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News