×
Ad

ಡಿಜಿಪಿ ಪಾಂಡೆ ರಾಜೀನಾಮೆ ಸ್ವೀಕರಿಸುವಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂ ಆದೇಶ

Update: 2017-04-03 15:19 IST

ಹೊಸದಿಲ್ಲಿ, ಎ.3: ಇಶ್ರಾತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ ಡಿಜಿಪಿ ಪಿ.ಪಿ.ಪಾಂಡೆ ರಾಜೀನಾಮೆ ಪತ್ರವನ್ನು ಸ್ವೀಕರಿಸುವಂತೆ ಗುಜರಾತ್ ಸರಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.

ರಾಜ್ಯಸರಕಾರ ಬಯಸಿದರೆ ಡಿಜಿಪಿ ಹುದ್ದೆ ತೊರೆಯಲು ತಾನು ಸಿದ್ಧ ಎಂದು ಪೊಲೀಸ್ ಅಧಿಕಾರಿ ಪಾಂಡೆ ಗುಜರಾತ್ ಸರಕಾರಕ್ಕೆ ಪತ್ರ ಬರೆದಿದ್ದರು.

ಪಾಂಡೆ ಈಗಾಗಲೇ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ಗುಜರಾತ್ ಸರಕಾರ ಸ್ವೀಕರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ಡಿವೈ ಚಂದ್ರಚೂಡ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯ ಪೀಠ ಆದೇಶಿಸಿದೆ.

ಇಶ್ರಾತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಲುಕಿದ್ದ ಪಾಂಡೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಎ.30ರ ತನಕ ಅವರ ಸೇವಾಅವಧಿಯನ್ನು ವಿಸ್ತರಿಸಲಾಗಿತ್ತು.

ಪಾಂಡೆ ತನ್ನ ಪತ್ರದಲ್ಲಿ ಹುದ್ದೆಯನ್ನು ತ್ಯಜಿಸುವ ಬಯಕೆ ವ್ಯಕ್ತಪಡಿಸಿದ್ದು, ಎ.30ರ ತನಕದ ತನ್ನ ನೇಮಕಾತಿಯ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ರಾಜ್ಯ ಸರಕಾರವನ್ನು ಕೋರಿದ್ದರು.

 ಪಾಂಡೆ ಓರ್ವ ಕೊಲೆ ಆರೋಪಿ. ಪಾಂಡೆಯ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿದೆ. ಅವರು ಒಂದು ದಿನವೂ ಉನ್ನತ ಹುದ್ದೆಯಲ್ಲಿರಲು ಅರ್ಹರಾಗಿಲ್ಲ. ಸೇವಾ ನಿವೃತ್ತಿಯ ಬಳಿಕ ಅವರ ಅಧಿಕಾರವನ್ನು ವಿಸ್ತರಿಸಲಾಗಿದೆ. ಜ.31 ರಂದು ನಿವೃತ್ತಿಯಾಗಿರುವ ಪಾಂಡೆಗೆ ಕೇಂದ್ರ ಸರಕಾರ ಮೂರು ತಿಂಗಳು ಸೇವಾ ವಿಸ್ತರಣೆಯನ್ನು ಮಾಡಿದೆ ಎಂದು ವಕೀಲ ಕಪಿಲ್ ಸಿಬಾಲ್ ವಾದಿಸಿದರು.

ಮುಂಬೈನ ಮುಂಬ್ರಾ ಮೂಲದ 19ರಹರೆಯದ ಇಶ್ರಾತ್ ಜಹಾನ್ ಎನ್‌ಕೌಂಟರ್ ನಡೆದಾಗ ಪಾಂಡೆ ಗುಜರಾತ್‌ನ ಕ್ರೈಂ ಬ್ರಾಂಚ್‌ನ ಮುಖ್ಯಸ್ಥರಾಗಿದ್ದರು. 2004ರ ಜೂ.15 ರಂದು ಅಹ್ಮದಾಬಾದ್‌ನ ಹೊರವಲಯದಲ್ಲಿ ಇಶ್ರಾತ್‌ರಲ್ಲದೆ ಇತರ ಮೂವರನ್ನು ಎನ್‌ಕೌಂಟರ್‌ನ ಮೂಲಕ ಸಾಯಿಸಲಾಗಿತ್ತು. ಈ ನಾಲ್ವರಿಗೆ ಉಗ್ರರ ಸಂಪರ್ಕವಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿಯ ಹತ್ಯೆಗೆ ಸಂಚು ರೂಚಿಸಿದ್ದರು ಎಂದು ಪೊಲೀಸರು ಹೇಳಿದ್ದರು.

ಹೈಕೋರ್ಟ್‌ನಿಂದ ರಚಿಸಲ್ಪಟ್ಟ ಸಿಟ್ ಪ್ರಕರಣದ ತನಿಖೆ ನಡೆಸಿದ್ದು, ಇದೊಂದು ನಕಲಿ ಎನ್‌ಕೌಂಟರ್ ಎಂದು ತೀರ್ಮಾನಕ್ಕೆ ಬಂದಿತ್ತು. ಆ ಬಳಿಕ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪಾಂಡೆ ಫೆ.2015ರಲ್ಲಿ ರಾಜ್ಯದ ಭ್ರಷ್ಟಾಚಾರ ವಿರೋಧಿ ದಳದ ನಿರ್ದೇಶಕರಾಗಿ ನೇಮಕಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News