ಜನಾಂಗೀಯ ದಾಳಿ: ಆಫ್ರಿಕನ್ ರಾಯಭಾರಿಗಳು ಕೆಂಡಾಮಂಡಲ, ಭಾರತಕ್ಕೆ ತೀವ್ರ ಮುಜುಗರ
ಹೊಸದಿಲ್ಲಿ,ಎ.3: ದಾಳಿಗಳಿಂದ ಆಫ್ರಿಕನ್ನರನ್ನು ರಕ್ಷಿಸಲು ಸಾಕಷ್ಟು ತೃಪ್ತಿಕರ ಹಾಗೂ ಗೋಚರವಾಗುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಭಾರತವು ವಿಫಲವಾಗಿದೆ ಎಂದು ಆಫ್ರಿಕಾದ ದೇಶಗಳ ರಾಯಭಾರಿಗಳ ಗುಂಪೊಂದು ಸೋಮವಾರ ಇಲ್ಲಿ ಹೇಳಿದೆಯಲ್ಲದೆ, ಈ ಬಗ್ಗೆ ಅಂತರರಾಷ್ಟ್ರೀಯ ವಿಚಾರಣೆಗೆ ಆಗ್ರಹಿಸಿದೆ.
ಕಳೆದ ವಾರ ನಡೆದಿರುವ ಆಫ್ರಿಕನ್ನರ ಮೇಲಿನ ದಾಳಿಗಳು ದ್ವೇಷದಿಂದ ಕೂಡಿದ್ದು, ಜನಾಂಗೀಯ ಸ್ವರೂಪದ್ದಾಗಿವೆ ಮತ್ತು ಈ ಘಟನೆಗಳನ್ನು ಭಾರತೀಯ ಅಧಿಕಾರಿಗಳು ತೃಪ್ತಿಕರ ರೀತಿಯಲ್ಲಿ ಖಂಡಿಸಿಲ್ಲ ಎಂದು ಈ ರಾಯಭಾರಿಗಳು ಹೇಳಿರುವುದು ಸರಕಾರವನ್ನು ತೀವ್ರ ರಾಜತಾಂತ್ರಿಕ ಮುಜುಗರದಲ್ಲಿ ಸಿಲುಕಿಸಿದೆ.
ಮಾದಕ ದ್ರವ್ಯ ಸೇವನೆಯಿಂದ ಗ್ರೇಟರ್ ನೊಯ್ಡದಲ್ಲಿ ಶಾಲಾ ವಿದ್ಯಾರ್ಥಿ ಯೋರ್ವ ಮೃತಪಟ್ಟಿದ್ದು, ಆತನಿಗೆ ನೈಜೀರಿಯಾ ವಿದ್ಯಾರ್ಥಿಗಳು ಮಾದಕ ದ್ರವ್ಯವನ್ನು ಪೂರೈಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವಾರ ಗ್ರೇಟರ್ ನೊಯ್ಡೆದಲ್ಲಿ ನೈಜೀರಿಯಾ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆಗಳು ನಡೆದಿದ್ದವು.
ನೈಜೀರಿಯಾ ವಿದ್ಯಾರ್ಥಿಗಳ ಮೇಲಿನ ಹಲ್ಲೆಗಳು ವೀಡಿಯೊ ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಫೂಟೇಜ್‌ಗಳ ಆಧಾರದಲ್ಲಿ ಸುಮಾರು 60 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಈ ಪೈಕಿ ಆರು ಜನರನ್ನು ಈವರೆಗೆ ಬಂಧಿಸಲಾಗಿದೆ.