ರಶ್ಯ: ಮೆಟ್ರೊ ರೈಲಿನಲ್ಲಿ ಅವಳಿ ಸ್ಫೋಟ
ಮಾಸ್ಕೊ, ಎ. 3: ರಶ್ಯದ ಸೇಂಟ್ ಪೀಟರ್ಸ್‌ಬರ್ಗ್‌ನ ಮೆಟ್ರೊ ರೈಲು ನಿಲ್ದಾಣದಲ್ಲಿ ಎರಡು ರೈಲು ಬೋಗಿಗಳಲ್ಲಿ ಸೋಮವಾರ ಸಂಭವಿಸಿದ ಸ್ಫೋಟಗಳಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟಗೊಂಡ ಒಂದು ಬಾಂಬ್‌ನಲ್ಲಿ ಲೋಹದ ಚೂರುಗಳು ತುಂಬಿದ್ದವು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬೆಲಾರುಸ್ ನಾಯಕ ಅಲೆಕ್ಸಾಂಡರ್ ಲುಕಶೆಂಕೊ ಜೊತೆ ಮಾತುಕತೆ ನಡೆಸುವುದಕ್ಕಾಗಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿದ್ದರು.
ಗಾಯಾಳುಗಳು ರೈಲ್ವೆ ಪ್ಲಾಟ್‌ಫಾರಂನಲ್ಲಿ ರಕ್ತ ಸುರಿಸುತ್ತಾ ಬಿದ್ದಿರುವ ದೃಶ್ಯಗಳನ್ನು ವೀಡಿಯೊವೊಂದು ತೋರಿಸಿದೆ. ಹಲವರನ್ನು ತುರ್ತು ಸೇವಾ ಸಿಬ್ಬಂದಿ ಉಪಚರಿಸುತ್ತಿದ್ದಾರೆ. ಸ್ಫೋಟ ನಡೆದ ಬಳಿಕ ಉಂಟಾದ ದಟ್ಟ ಹೊಗೆಯ ನಡುವೆಯೇ ಜನರು ನಿಲ್ದಾಣದಿಂದ ಹೊರಗೋಡಿದರು.
ಸ್ಫೋಟ ಸಂಭವಿಸಿದ ಬೋಗಿಯೊಂದರ ಪಕ್ಕದಲ್ಲಿ ಬೃಹತ್ ಹೊಂಡವೊಂದು ರೂಪುಗೊಂಡಿದೆ. ರೈಲಿನ ಲೋಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಸೇಂಟ್ ಪೀಟರ್ಸ್‌ನ ಎಲ್ಲ ಮೆಟ್ರೊ ನಿಲ್ದಾಣಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ.
ಹಿಂದಿನ ವರ್ಷಗಳಲ್ಲಿ ಚೆಚನ್ ಬಂಡುಕೋರರು ರಶ್ಯವನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಾ ಬಂದಿದ್ದಾರೆ.2010ರಲ್ಲಿ ಮಾಸ್ಕೋದಲ್ಲಿ ನಿಂತ ಮೆಟ್ರೊ ರೈಲುಗಳಲ್ಲಿ ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡಾಗ ಕನಿಷ್ಠ 38 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
2004ರಲ್ಲಿ ದಕ್ಷಿಣ ರಶ್ಯದ ಶಾಲೆಯೊಂದರಲ್ಲಿ ಭಯೋತ್ಪಾದಕರು ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿದ್ದಾಗ, ಪೊಲೀಸರು ಶಾಲೆಗೆ ನುಗ್ಗಿ ಪ್ರತಿದಾಳಿ ಮಾಡಿದ ಘಟನೆಯಲ್ಲಿ 330ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಪೈಕಿ ಅರ್ಧದಷ್ಟು ಮಂದಿ ಮಕ್ಕಳು.