×
Ad

ಉತ್ತರ ಕೊರಿಯವನ್ನು ಚೀನಾ ನಿಯಂತ್ರಿಸದಿದ್ದರೆ ನಾವೇ ನೋಡಿಕ್ಳೊತ್ತೇವೆ: ಟ್ರಂಪ್

Update: 2017-04-03 20:07 IST

ವಾಶಿಂಗ್ಟನ್, ಎ. 3: ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸುವ ವಿಷಯದಲ್ಲಿ ನೆರವು ನೀಡಲು ಚೀನಾಕ್ಕೆ ಇಷ್ಟವಿಲ್ಲದಿದ್ದರೆ, ಅಮೆರಿಕ ಏಕಪಕ್ಷೀಯವಾಗಿ ವ್ಯವಹರಿಸುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

‘‘ಉತ್ತರ ಕೊರಿಯದ ಸಮಸ್ಯೆಯನ್ನು ಚೀನಾ ಬಗೆಹರಿಸದಿದ್ದರೆ, ನಾವು ಬಗೆಹರಿಸುತ್ತೇವೆ. ಇಷ್ಟನ್ನು ನಾನು ನಿಮಗೆ ಹೇಳಬಲ್ಲೆ’’ ಎಂದು ‘ಫೈನಾನ್ಸಿಯಲ್ ಟೈಮ್ಸ್ ಅಫ್ ಲಂಡನ್’ಗೆ ನೀಡಿದ ರವಿವಾರ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯ ಕೆಲವೇ ದಿನಗಳ ಮುನ್ನ ಈ ಹೇಳಿಕೆ ಹೊರಬಿದ್ದಿದೆ. ಉಭಯ ನಾಯಕರು ಅಮೆರಿಕದ ಫ್ಲೋರಿಡ ರಾಜ್ಯದಲ್ಲಿರುವ ಟ್ರಂಪ್ ಒಡೆತನದ ಮಾರ್-ಅ-ಲ್ಯಾಗೊ ರಿಸಾರ್ಟ್‌ನಲ್ಲಿ ಗುರುವಾರ ಮತ್ತು ಶುಕ್ರವಾರ ಭೇಟಿಯಾಗಲಿದ್ದಾರೆ. ಇದು ಅವರಿಬ್ಬರ ಮೊದಲ ಭೇಟಿಯಾಗಿರುತ್ತದೆ.

ಉತ್ತರ ಕೊರಿಯ ನಿರಂತರವಾಗಿ ಪ್ರಕ್ಷೇಪಕ ಕ್ಷಿಪಣಿ ಹಾರಾಟ ಪರೀಕ್ಷೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ವಲಯದಲ್ಲಿ ಉದ್ವಿಗ್ನತೆ ನೆಲೆಸಿದೆ. ಅದೂ ಅಲ್ಲದೆ, ತನ್ನ ದೇಶವು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ ಅಭಿವೃದ್ಧಿಯ ಅಂತಿಮ ಹಂತಗಳಲ್ಲಿದೆ ಎಂದು ಆ ದೇಶದ ನಾಯಕ ಕಿಮ್ ಜಾಂಗ್ ಉನ್ ಹೇಳಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News