ಸಾಲದ ಬಡ್ಡಿ ದರ ಇಳಿಸಿ, ಇತರ ಶುಲ್ಕ ಹೆಚ್ಚಿಸಿದ ಎಸ್‌ಬಿಐ
ಹೊಸದಿಲ್ಲಿ, ಎ.3: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸಿದೆ. ಆದರೆ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತ ಇರಿಸಿಕೊಂಡಿರದ ಗ್ರಾಹಕರ ಮೇಲೆ ವಿಧಿಸಲಾಗುವ ದಂಡ ಶುಲ್ಕ , ಚೆಕ್ ಬುಕ್, ಲಾಕರ್ ಸೌಲಭ್ಯ ಇತ್ಯಾದಿ ಸೇವೆಗಳಿಗೆೆ ವಿಧಿಸಲಾಗುವ ಶುಲ್ಕವನ್ನು ಹೆಚ್ಚಿಸಿದೆ. ಎಸ್‌ಬಿಐ ಮಾದರಿಯಲ್ಲಿಯೇ ಇತರ ಬ್ಯಾಂಕ್ಗಳೂ ಶುಲ್ಕ ಏರಿಸುವ ನಿರೀಕ್ಷೆಯಿದೆ.
ಈ ತಿಂಗಳು ಎಸ್‌ಬಿಐ ಜೊತೆ ವಿಲೀನಗೊಂಡಿರುವ ಐದು ಸಹ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರ ಮೇಲೆ ಈ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ. ಬ್ಯಾಂಕ್‌ಗಳ ವಿಲೀನದ ಬಳಿಕ ಎಸ್‌ಬಿಐ ಗ್ರಾಹಕರ ಸಂಖ್ಯೆ 37 ಕೋಟಿಗೆ ಏರಿಕೆಯಾಗಿದೆ.
ಆರು ಮಹಾನಗರಗಳಲ್ಲಿರುವ ಎಸ್‌ಬಿಐ ಶಾಖೆಗಳಲ್ಲಿ ಖಾತೆದಾರರು 5000 ರೂ. ತಿಂಗಳ ಸರಾಸರಿ ಬ್ಯಾಲೆನ್ಸ್ ಹೊಂದಿರಬೇಕು. ಇಲ್ಲದಿದ್ದರೆ ರೂ. 100ರವರೆಗೆ ದಂಡ ವಿಧಿಸಲಾಗುತ್ತದೆ. 2017ರ ಮಾರ್ಚ್ 31ರವರೆಗೆ ತಿಂಗಳ ಸರಾಸರಿ ಬ್ಯಾಲೆನ್ಸ್ ಮೊತ್ತ 500 ರೂ. (ಚೆಕ್ ಪುಸ್ತಕದ ಸೌಲಭ್ಯ ಇರದಿದ್ದರೆ) ಮತ್ತು 1000 ರೂ. (ಚೆಕ್ ಪುಸ್ತಕದ ಸೌಲಭ್ಯ ಇದ್ದರೆ ) ಆಗಿತ್ತು .ತಿಂಗಳ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಮೊತ್ತವನ್ನು ಮಹಾನಗರ, ನಗರ, ಗ್ರಾಮೀಣ- ಹೀಗೆ ಪ್ರತ್ಯೇಕ ಪ್ರದೇಶಗಳಿಗೆ ಪ್ರತ್ಯೇಕವಾಗಿ ನಿಗದಿಗೊಳಿಸಲಾಗಿದೆ.
ಮಹಾನಗರ ಶಾಖೆಗಳ ಖಾತೆದಾರರಿಗೆ ಎಂಎಬಿ 5000 ರೂ, ಇದಕ್ಕೆ ವಿಫಲವಾದರೆ ರೂ.50ರಿಂದ 100ರವರೆಗೆ ದಂಡ ವಿಧಿಸಲಾಗುವುದು. ನಗರ ಮತ್ತು ಅರೆನಗರ ಪ್ರದೇಶದ ಶಾಖೆಗಳ ಖಾತೆದಾರರಿಗೆ ಎಂಬಿಎ ಅನುಕ್ರಮವಾಗಿ 3000 ರೂ ಮತ್ತು 2000 ರೂ. ಆಗಿದೆ. ಗ್ರಾಮೀಣ ಪ್ರದೇಶದ ಶಾಖೆಗಳ ಖಾತೆದಾರರಿಗೆ ಎಂಬಿಎ 1000 ರೂ. ಇದಕ್ಕೆ ವಿಫಲವಾದರೆ ರೂ.20ರಿಂದ 50 ರೂ.ವರೆಗೆ ದಂಡ ವಿಧಿಸಲಾಗುವುದು.
2017ರ ಎಪ್ರಿಲ್ 1ರಿಂದ ಅನ್ವಯವಾಗುವಂತೆ ಎಸ್‌ಬಿಐ ಮೂಲ ದರವನ್ನು 15 ಮೂಲ ಅಂಕದಷ್ಟು ಕಡಿತಗೊಳಿಸಿ , ಶೇ.9.25ರಿಂದ ಶೇ. 9.10ಕ್ಕೆ ಇಳಿಸಿದೆ. ಕನಿಷ್ಟ ವೆಚ್ಚ ಆಧಾರಿತ ಸಾಲ ದರ (ಎಂಸಿಎಲ್‌ಆರ್)ದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಈ ಹಿಂದಿನಂತೆಯೇ ಆರು ತಿಂಗಳಾವಧಿಯ ಎಂಸಿಎಲ್‌ಆರ್ ಶೇ. 7.95 ಹಾಗೂ ಮೂರು ವರ್ಷದ ಎಂಸಿಎಲ್‌ಆರ್ ಶೇ. 8.15 ಆಗಿರುತ್ತದೆ.
ಈ ಹೊಸ ದರಗಳು ಸುರಭಿ, ಮೂಲ ಉಳಿತಾಯ ಬ್ಯಾಂಕ್ ಮತ್ತು ಪ್ರಧಾನಿ ಜನಧನ ಜನೆ ಖಾತೆಗಳಿಗೆ ಅನ್ವಯಿಸುವುದಿಲ್ಲ.