ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ

Update: 2017-04-03 17:16 GMT

ಮಂಗಳೂರು, ಎ. 3: ನಗರಕ್ಕೆ ಆಗಮಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಬೆಳಗ್ಗೆ ಸಭೆ ನಡೆಸಿ ಕರಾವಳಿ ಭಾಗದಲ್ಲಿ ಸಕ್ರಿಯವಾಗಿರವ ಕೆಲವು ಮತೀಯವಾಗಿ ಸಂಘಟನೆಗಳ ಚಟುವಟಿಕೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

 ಎನ್‌ಐಎ ದೆಹಲಿ ಕೇಂದ್ರ ಕಚೇರಿ ಮತ್ತು ಹೈದರಾಬಾದ್ ಹಾಗೂ ಕೊಚ್ಚಿಯ ವಿಭಾಗೀಯ ಕಚೇರಿಗಳ ಹಿರಿಯ ಅಧಿಕಾರಿಗಳು ರವಿವಾರ ನಗರಕ್ಕೆ ಆಗಮಿಸಿದ್ದು, ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್, ಡಿಸಿಪಿಗಳಾದ ಕೆ.ಎಂ.ಶಾಂತರಾಜು ಮತ್ತು ಡಾ.ಸಂಜೀವ್ ಎಂ.ಪಾಟೀಲ್ ಅವರನ್ನೊಳಗೊಂಡ ನಗರ ಪೊಲೀಸರ ತಂಡ ಸೋಮವಾರ ಬೆಳಗ್ಗೆ ಎನ್‌ಐಎ ಅಧಿಕಾರಿಗಳನ್ನು ಭೇಟಿ ಮಾಡಿ ಸಭೆ ನಡೆಸಿದೆ.

 ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಚಂದ್ರಶೇಖರ್, ನಾವು ಎನ್‌ಐಎ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಈ ಪ್ರದೇಶದಲ್ಲಿ ಸಕ್ರಿಯವಾಗಿರುವ ಕೆಲವು ಮತೀಯವಾದಿ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಂಡಿದೆ. ಮತೀಯ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಮಾಹಿತಿಗಳನ್ನು ಹಂಚಿಕೊಂಡಿದೆ ಎಂದರು.

ಐಎಸ್ ಸಂಘಟನೆ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಿಷನರ್, ಕೇರಳದಿಂದ ಕೆಲವರು ಐಎಸ್ ಸಂಘಟನೆ ಸೇರಿರುವ ಕುರಿತು ಮೊದಲಿನಿಂದಲೂ ಎನ್‌ಐಎ ತನಿಖೆ ನಡೆಸುತ್ತಿದೆ. ಮಂಗಳೂರು ಭಾಗದಲ್ಲಿ ಅಂತಹ ಪ್ರಯತ್ನಗಳು ನಡೆಯದಂತೆ ನಿಗಾ ವಹಿಸಲಾಗಿದೆ ಎಂದರು. ಪಿಎಫ್‌ಐಗೆ ಐಸಿಸ್ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

2016ರ ಫೆ.21ರಂದು ಜೋಕಟ್ಟೆಯ ಎಂಆರ್‌ಪಿಎಲ್ ರಸ್ತೆಯಲ್ಲಿ ನಡೆದಿದ್ದ ಪ್ರಕಾಶ್ ಪೂಜಾರಿ ಕೊಲೆಯತ್ನ ಪ್ರಕರಣದಲ್ಲಿ ಖಾದರ್ ಕುಳಾಯಿ ಎಂಬಾತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ.ಚಂದ್ರಶೇಖರ್ ತಿಳಿಸಿದರು.

ಪ್ರಕರಣ ನಡೆದು ಒಂದು ವರ್ಷ ಒಂದು ತಿಂಗಳ ಬಳಿಕ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಖಾದರ್ ಕುಳಾಯಿ ಪಾತ್ರದ ಸಂಶಯವಿದೆ. ಆತನನ್ನು ವಿಚಾರಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News