ಗೋವು ಮಾತ್ರವಲ್ಲ, ರೈತರ ರಕ್ಷಣೆಗೂ ಗಮನ ಅಗತ್ಯ : ಶಿವಸೇನೆ
ಮುಂಬೈ, ಎ.3: ಗೋ ಹತ್ಯೆ ಮಾಡುವವರನ್ನು ಉಗ್ರವಾಗಿ ಶಿಕ್ಷಿಸುವ ಕಾನೂನು ಅನುಷ್ಠಾನಗೊಳಿಸಿರುವ ಬಿಜೆಪಿ ಆಡಳಿತದ ರಾಜ್ಯಗಳ ಕ್ರಮವನ್ನು ಅಣಕವಾಡಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಗೋಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ಎಂದಾದಲ್ಲಿ, ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣವಾಗುವ ಸರಕಾರಗಳನ್ನೂ ಕೊಲೆ ಆರೋಪದಡಿ ಶಿಕ್ಷಿಸಬೇಕು ಎಂದು ಹೇಳಿದ್ದಾರೆ.
ಗೋಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆಯ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತರಾದ ಸರಕಾರಕ್ಕೂ ಶಿಕ್ಷೆಯಾಗಬೇಕು. ಗೋವಿನಂತೆಯೇ ರೈತರಿಗೂ ಬದುಕುವ ಹಕ್ಕಿದೆ. ಗೋವುಗಳ ರೀತಿಯಲ್ಲೇ ರೈತರ ಸಂರಕ್ಷಣೆಗೂ ಗಮನ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಗೋವುಗಳು ಮುದಿಯಾದಾಗ ಅವುಗಳ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಹಿಂದುತ್ವದ ಪರವಾಗಿರುವ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ , ಭಾರತವು ವಿಶ್ವದ ಅಗ್ರ ಮಾಂಸ ರಫ್ದುದಾರ ರಾಷ್ಟ್ರಗಳ ಪಟ್ಟಿಯಲ್ಲಿ ಹೇಗೆ ಸ್ಥಾನ ಪಡೆದಿದೆ ಎಂದು ಅರ್ಥವಾಗುತ್ತಿಲ್ಲ . ಕಳೆದ ಎರಡು ವರ್ಷಗಳಲ್ಲಿ ಗೋಮಾಂಸದ ರಫ್ತು ಪ್ರಮಾಣ ಹೆಚ್ಚಾಗಿದೆ ಎಂದರು.
ರೈತರು ಮುಷ್ಕರಕ್ಕೆ ಮುಂದಾಗುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಕಾನೂನು ಸ್ಥಿತಿ ಕುಸಿದಿದೆ ಎಂದರ್ಥ. ಹತಾಶರಾಗಿರುವ ರೈತರ ನೆರವಿಗೆ ರಾಜ್ಯ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮಕ್ಕೆ ಸರಕಾರವನ್ನು ಹೊಣೆಗಾರರನ್ನಾಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗೋ ಹತ್ಯೆ ಮಾಡಿದವರಿಗೆ ದಂಡ ವಿಧಿಸುವ ಕುರಿತು ಏಕರೂಪದ ಕಾನೂನು ಅಗತ್ಯ ಎಂದು ರಾಜ್ಯದಲ್ಲಿ ಸರಕಾರದ ಅಂಗಪಕ್ಷವಾಗಿರುವ ಶಿವಸೇನೆ ಅಭಿಪ್ರಾಯಪಟ್ಟಿದೆ.