ಸಿರಿಯ ನಿರಾಶ್ರಿತರಿಗೆ ಹೆಚ್ಚು ನೆರವು ನೀಡಿ ಕೊಲ್ಲಿ ದೇಶಗಳಿಗೆ ವಿಶ್ವಸಂಸ್ಥೆ ಕರೆ

Update: 2017-04-04 14:46 GMT

ಕುವೈತ್ ಸಿಟಿ, ಎ. 4: ಸಿರಿಯದಲ್ಲಿ ಆರು ವರ್ಷಗಳ ಅಂತರ್ಯುದ್ಧದಿಂದ ನಿರ್ವಸಿತರಾದ ಸಿರಿಯನ್ನರಿಗೆ ಸಹಾಯ ಮಾಡುವಂತೆ ವಿಶ್ವಸಂಸ್ಥೆಯ ಹಿರಿಯ ನಿರಾಶ್ರಿತ ಅಧಿಕಾರಿಯೊಬ್ಬರು ಕೊಲ್ಲಿ ಅರಬ್ ದೇಶಗಳಿಗೆ ಕರೆ ನೀಡಿದ್ದಾರೆ. ಬಿಕ್ಕಟ್ಟು ಶೀಘ್ರದಲ್ಲಿ ಮುಗಿಯುವ ಲಕ್ಷಣಗಳು ತನಗೆ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇರಾಕ್‌ನಲ್ಲಿರುವ ಸಿರಿಯ ನಿರಾಶ್ರಿತರಿಗೆ ನೆರವು ನೀಡುವುದಕ್ಕೆ ಸಂಬಂಧಿಸಿದ ಸುಮಾರು 65 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕಾಗಿ ಕುವೈತ್‌ನಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನ್ (ಯುಎನ್‌ಎಚ್‌ಸಿಆರ್)ನ ಉಪ ಕಮಿಶನರ್ ಕೆಲ್ಲಿ ಟಿ. ಕ್ಲೆಮಂಟ್ಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿರಿಯದ ಆಂತರಿಕ ಯುದ್ಧದಿಂದಾಗಿ ಪಲಾಯನಗೈದಿರುವ ನಿರಾಶ್ರಿತರ ಸಂಖ್ಯೆ 50 ಲಕ್ಷವನ್ನು ದಾಟಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

‘‘ನಿರಾಶ್ರಿತರು ಸುರಕ್ಷಿತವಾಗಿ ಹಾಗೂ ಘನತೆಯಿಂದ ಮತ್ತು ಸ್ವಯಂಪ್ರೇರಿತವಾಗಿ ಮನೆಗೆ ಮರಳಲು ಸಾಧ್ಯವಾಗುವ ರಾಜಕೀಯ ಪರಿಹಾರವೊಂದನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ’’ ಎಂದು ಕ್ಲೆಮಂಟ್ಸ್ ಹೇಳಿದರು.

ಸರಕಾರಿ ವಿರೋಧಿ ಪ್ರತಿಭಟನೆಗಳು 2011ರಲ್ಲಿ ಬಂಡುಕೋರರು, ಭಯೋತ್ಪಾದಕರು, ಸರಕಾರಿ ಪಡೆಗಳು ಮತ್ತು ವಿದೇಶಿ ಬೆಂಬಲಿಗರ ನಡುವಿನ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಾಗಿನಿಂದ ಸಿರಿಯನ್ನರು ಗಡಿ ದಾಟಿ ಟರ್ಕಿ, ಲೆಬನಾನ್, ಜೋರ್ಡಾನ್ ಮತ್ತು ಇರಾಕ್‌ಗಳಿಗೆ ವಲಸೆ ಹೋಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News