ಪ್ರಯಾಣಿಕನಿಗೆ 149 ಕೋಟಿ ರೂ. ಬಿಲ್ ಮಾಡಿದ ಓಲಾ ಕ್ಯಾಬ್ !

Update: 2017-04-04 16:56 GMT

ಮುಂಬೈ, ಎ . : ಮುಂಬೈ ನಿವಾಸಿ ಸುಶೀಲ್ ನರ್ಸಿಯನ್ ಈ ಬಾರಿಯ ಮೂರ್ಖರ ದಿನ ಮರೆಯಲು ಸಾಧ್ಯವೇ ಇಲ್ಲ. ಎಪ್ರಿಲ್ ಒಂದರಂದು ಮುಲುಂಡ್ ನಲ್ಲಿರುವ ತಮ್ಮ ಮನೆಯಿಂದ ವಕೋಲ ಮಾರ್ಕೆಟ್ ಗೆ ಹೋಗಲು ಅವರು ಓಲಾ ಕ್ಯಾಬ್ ಬುಕ್ ಮಾಡಿದರು. ಆದರೆ ಬುಕ್ಕಿಂಗ್ ಪಡೆದ ಚಾಲಕನ ಮೊಬೈಲ್ ಬಂದ್ ಆದ್ದರಿಂದ ಆತನಿಗೆ ಸುಶೀಲ್ ಮನೆ ಕಂಡು ಹಿಡಿಯಲು ಆಗಲಿಲ್ಲ. ಸುಶೀಲ್ ಸ್ವತಃ ಚಾಲಕನಿರುವಲ್ಲಿಗೆ ನಡೆದುಕೊಂಡು ಹೋದರಾದರೂ ಅಷ್ಟು ಹೊತ್ತಿಗೆ ಆತ ಬುಕ್ಕಿಂಗ್ ರದ್ದು ಮಾಡಿ ಹೊರಟು ಹೋಗಿದ್ದ. 

ಆದರೆ ಆ ಬಳಿಕ ನಡೆದದ್ದು ಮಾತ್ರ ಅತ್ಯಂತ ಆಶ್ಚರ್ಯಕರವಾಗಿದೆ. ತನಗೆ ಇನ್ನೊಂದು ಕ್ಯಾಬ್ ಬುಕ್ ಮಾಡಲು ಹೋರಾಟ ಸುಶೀಲ್ ಗೆ ದೊಡ್ಡ ಅಚ್ಚರಿ ಜೊತೆಗೆ ಆಘಾತ ಕಾದಿತ್ತು. ತಾನು ಈಗಾಗಲೇ 1,49,10,51,648 ರೂಪಾಯಿ ಬಾಕಿ ಇಟ್ಟಿರುವುದರಿಂದ ಬುಕ್ ಮಾಡಲು ಸಾಧ್ಯವಿಲ್ಲ ಎಂದು ಓಲಾ ಮೊಬೈಲ್ ಆಪ್ ಅವರಿಗೆ ಹೇಳುತ್ತಿತ್ತು !  ಆ ಮೊತ್ತ ಎಷ್ಟು ಎಂದು ಎಣಿಸಲು ಹೆಣಗಾಡುತ್ತಿದ್ದೀರಾ ? 149 ಕೋಟಿಗೂ ಹೆಚ್ಚು ಮೊತ್ತ ಅದು ! ಸಾಲದ್ದಕ್ಕೆ ಸುಶೀಲ್ ರ ಮೊಬೈಲ್ ವ್ಯಾಲೆಟ್ ನಲ್ಲಿದ್ದ 127 ರೂ . ವನ್ನು ಓಲಾ ಕಟ್ ಮಾಡಿತ್ತು. 

ಇದು ಏಪ್ರಿಲ್ ಫೂಲ್ ಪ್ರಯತ್ನ ಇರಬಹುದು ಎಂದುಕೊಂಡ ಸುಶೀಲ್ ಓಲಾ ಕಂಪೆನಿಯನ್ನು ಸಂಪರ್ಕಿಸಿದರು. ಇದು ತಾಂತ್ರಿಕ ಸಮಸ್ಯೆಯಿಂದ ಆಗಿರುವ ಅವಾಂತರ ಎಂದು ಕಂಪೆನಿ ಸ್ಪಷ್ಟಪಡಿಸಿತು. ಅವರಿಂದ ಪಡೆದಿದ್ದ ಹಣವನ್ನು ವಾಪಸ್ ಮಾಡಿ ಬಳಿಕ ಅವರನ್ನು " 149 ಕೋಟಿ ಸಾಲದ ಹೊರೆ " ಯಿಂದಲೂ ಮುಕ್ತ ಮಾಡಿತು. 

ಓಲಾದ ಈ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ, ಹಾಸ್ಯಕ್ಕೆ ಕಾರಣವಾಯಿತು. " ಪ್ಲುಟೊ ಗೃಹದಿಂದ ನೇಪ್ಚೂನ್ ಗ್ರಹಕ್ಕೆ " ಕರೆದುಕೊಂಡು ಹೋಗಲು ಇಷ್ಟು ದರ ವಿಧಿಸಿತೇ ಓಲಾ ? " ಎಂಬ ಹಾಸ್ಯ ಚಟಾಕಿಗಳು ಹರಿದಾಡಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News