×
Ad

ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿವಿಯ ಅರ್ಜಿಯಲ್ಲಿ ಒಂದೇ ವಾಕ್ಯವನ್ನು ನೂರು ಬಾರಿ ಬರೆದು ಪಾಸಾದ !

Update: 2017-04-05 14:56 IST

ಕ್ಯಾಲಿಫೋರ್ನಿಯಾ,ಎ.5 : ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಪ್ರವೇಶಾತಿ ಅರ್ಜಿಯಲ್ಲಿನ ಪ್ರಶ್ನೆ ‘ವಾಟ್ ಮ್ಯಾಟರ್ಸ್ ಯು ಎಂಡ್ ವೈ?’’ ಎಂಬ ಪ್ರಶ್ನೆಗೆ ನ್ಯೂಜೆರ್ಸಿಯ ಪ್ರಿನ್ಸ್ ಟನ್ ಪ್ರದೇಶದ 18 ವರ್ಷದ ಮುಸ್ಲಿಮ್ ಯುವಕ ಝಿಯಾದ್ ಅಹ್ಮದ್ ಏನು ಬರೆದಿದ್ದ ಗೊತ್ತೇನು ?

‘‘ಬ್ಲ್ಯಾಕ್‌ಲೈವ್ಸ್‌ಮ್ಯಾಟರ್ಸ್’’ ( ಕಪ್ಪು ಜೀವಗಳೂ ಮಹತ್ವದ್ದು) ಎಂದು ನೂರು ಬಾರಿ ಬರೆದಿದ್ದ.

ಇದನ್ನೋದಿ ವಿಶ್ವವಿದ್ಯಾನಿಲಯ ಆತನ ಪ್ರವೇಶ ಅರ್ಜಿಯನ್ನು ನಿರಾಕರಿಸಬಹುದೆಂದು ಯಾರಾದರೂ ಅಂದುಕೊಂಡಿದ್ದರೆ ಅದು ತಪ್ಪು. ಆತನಿಗೆ ವಿವಿ ಪ್ರವೇಶಾತಿ ದೊರೆತೇ ಬಿಟ್ಟಿದ್ದು ಈ ಬಗ್ಗೆ ವಿಶ್ವವಿದ್ಯಾಲಯದ ಸ್ವೀಕೃತಿ ಪತ್ರವೂ ದೊರೆತಿದೆ.

‘‘ಅವರು ನನಗೆ ಪ್ರವೇಶ ನೀಡುತ್ತಾರೆಂದು ನಾನು ಊಹಿಸಿರಲಿಲ್ಲ. ಆದರೆ ಅವರು ನನ್ನ ನೇರ ಅಭಿಪ್ರಾಯವನ್ನು ಒಂದು ಹೊರೆ ಎಂದು ತಿಳಿಯುವ ಬದಲು ಅದನ್ನು ಒಪ್ಪಿರುವುದು ಸಂತಸ’’ ಎಂದು ಅಹ್ಮದ್ ಹೇಳುತ್ತಾನೆ.

ತನ್ನ ಬ್ಲ್ಯಾಕ್‌ಲೈವ್ಸ್ ಮ್ಯಾಟರ್ಸ್ ಬಗ್ಗೆ ಪ್ರತಿಕ್ರಿಯಿಸಿದ ಅಹ್ಮದ್  ‘‘ನನಗೆ ಮುಸ್ಲಿಮ್ ಎಂದರೆ ಕರಿಯ ಜನರ ಸ್ನೇಹಿತನೆಂದೇ ಅರ್ಥ’’ ಎಂದರು. ಈತನ ಉತ್ತರವೀಗ ವೈರಲ್ ಆಗಿ ಬಿಟ್ಟಿದೆ. ಈತನಿಗೆ ಶ್ವೇತ ಭವನದ ಇಫ್ತಾರ್ ಕೂಟಕ್ಕೆ ಆಹ್ವಾನಿಸಲಾಗಿತ್ತು, ಡೆಮಾಕ್ರೆಟ್ ನಾಯಕರಾದ ಮಾರ್ಟಿನ್ ಒ ಮಲ್ಲೆ ಹಾಗೂ ಹಿಲರಿ ಕ್ಲಿಂಟನ್ ಪ್ರಚಾರದಲ್ಲಿ ಆತ ಭಾಗಿಯಾಗಿದ್ದ ಹಾಗೂ ಯುವ ಜನರ ಸಾಮಾಜಿಕ ಕಾರ್ಯಗಳ ಬಗ್ಗೆ ಟೆಡ್ ಟಾಕ್  ಕೂಡ ಈತ ನೀಡಿದ್ದಾನೆ.

ಈತನಿಗೆ ಪ್ರಿನ್ಸ್ ಟನ್ ಮತ್ತು ವೇಲ್ ವಿಶ್ವವಿದ್ಯಾನಿಲಯಗಳೂ ಪ್ರವೇಶಾತಿ ನೀಡಿದ್ದವು.

ಅಹ್ಮದ್ ಯುವಜನರ ಸಾಮಾಜಿಕ ನ್ಯಾಯ ಸಂಘಟನೆ ರೆಡಿಫೈ ಕೂಡ ಸ್ಥಾಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News