ಸಂಘಪರಿವಾರದಂತೆ ದಕ್ಷಿಣ ಕನ್ನಡ ಪೊಲೀಸರ ವರ್ತನೆ ಸರಿಯಲ್ಲ: ಎಸ್‌ಡಿಪಿಐ
ಚಿಕ್ಕಮಗಳೂರು, ಎ.5: ಅಮಾಯಕರ ಮೇಲೆ ದೌರ್ಜನ್ಯ ನಡೆಸುವುದರಲ್ಲಿ ಸಂಘಪರಿವಾರವನ್ನೇ ಮಂಗಳೂರು ಸಿಸಿಬಿ ಪೊಲೀಸರು ಮೀರಿಸುತ್ತಿದ್ದಾರೆ. ಇಂತಹ ಕೃತ್ಯದ ವಿರುದ್ದ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾದ್ಯಾದ್ಯಂತ ಎಸ್‌ಡಿಪಿಐ ಪ್ರತಿಭಟನೆ ನಡೆಸಲಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸೈಯ್ಯದ್ ಅಜ್ಮತ್ ಎಚ್ಚರಿಕೆ ನೀಡಿದ್ದಾರೆ.ಅವರು ಬುಧವಾರ ಈ ಕುರಿತು ಹೇಳಿಕೆ ನೀಡಿದ್ದು, ಅನ್ಯಮತೀಯ ಹೆಣ್ಣಿನ ಜೊತೆ ಮಾತಾಡುವ, ಜಾನುವಾರು, ಮತಾಂತರ ಎನ್ನುವಂತಹ ಕಾರಣಗಳನ್ನು ಮುಂದಿಟ್ಟು ದಕ ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಳು ಮುಸ್ಲಿಮರನ್ನು, ಕ್ರೈಸ್ತರನ್ನು ಗುರಿಯಾಗಿಸಿ ಮಾರಣಾಂತಿಕವಾಗಿ ಹಲ್ಲೆ, ಕೊಲೆ, ಮನೆಗೆ ನುಗ್ಗಿ ದಾಂಧಲೆ ನಡೆಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದಾರೆ. ಅದೇ ಪ್ರವೃತ್ತಿಯನ್ನು ಮಂಗಳೂರು ಕುೀಷನರೇಟ್ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ನಡೆಸಿಕೊಂಡು ಬರುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.ಬಂಧನದ ಎರಡು ದಿನಗಳ ನಂತರ ಕುಟುಂಬಿಕರು ನ್ಯಾಯಾಲಯದಲ್ಲಿ ಸರ್ಚ್ ವಾರೆಂಟ್ ಹಾಕಿದರೂ,ಲೆಕ್ಕಿಸದೆ ಪೋಲೀಸ್ ಕುೀಷನರ್ ಮತ್ತು ಇಬ್ಬರು ಡಿಸಿಪಿಗಳ ಕುಮ್ಮಕ್ಕಿನಿಂದ 6 ದಿನಗಳ ವರೆಗೆ ಅಕ್ರಮವಾಗಿ ಬಂದಿಸಿಟ್ಟದ್ದು ಮಾತ್ರವಲ್ಲದೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ. ಅವಾಚ್ಯವಾಗಿ ಬೈದು ಮುಸ್ಲಿಂ ಎನ್ನುವ ಕಾರಣಕ್ಕಾಗಿ ಜಾತಿ ನಿಂದನೆ ಮಾಡಿದ್ದಾರೆ. ನ್ಯಾಯಾಧೀಶರ ಎದುರಲ್ಲಿ ಹೊಡೆದಿಲ್ಲವೆಂದು ಹೇಳುವಂತೆ ಬಲವಂತಪಡಿಸಿ,ನಂತರ ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ. ಇದರಲ್ಲಿ ಖುರೈಶ್ ಎನ್ನುವ ಯುವಕ ಜೈಲಿನಲ್ಲಿ ರಕ್ತ ವಾಂತಿ ಮಾಡಿದ್ದಾನೆ. ಘಟನೆಯ ಗಂಭೀರತೆಯನ್ನು ಅರಿತು ಜೈಲಾಧಿಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯ ವರದಿಯಂತೆ ಪೊಲೀಸರ ಹಲ್ಲೆಯಿಂದ ಖುರೈಶ್‌ನ ಕಿಡ್ನಿ ವಿಫಲವಾಗಿದೆ. ಈ ಮೂಲಕ ದ.ಕ.ಜಿಲ್ಲೆಯ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪೊಲೀಸರು ಮುಸ್ಲಿಂ ವಿರೋಧದಲ್ಲಿ ಮತ್ತು ಅಮಾಯಕರ ಮೇಲೆ ದೌರ್ಜನ್ಯ ನಡೆಸುವುದರಲ್ಲಿ ಸಂಘಪರಿವಾರವನ್ನು ಮೀರಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.