×
Ad

ಅಹ್ಮದ್ ಖುರೇಷಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯ: ದಿನೇಶ್ ಹೆಗ್ಡೆ ಉಳೇಪಾಡಿ

Update: 2017-04-05 17:12 IST

ಮಂಗಳೂರು, ಎ.5: ಸಿಸಿಬಿ ಪೊಲೀಸರ ದೌರ್ಜನ್ಯದಿಂದಾಗಿ ಕಿಡ್ನಿ ವೈಫಲ್ಯಕ್ಕೊಳಗಾಗಿ ನಗರದ ವೆನ್‌ಲಾಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಹ್ಮದ್ ಖುರೇಷಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಖುರೇಷಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದ್ದಾರೆ.

ಈ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಪೊಲೀಸ್ ದೌರ್ಜನ್ಯದಿಂದ ಜರ್ಝರಿತನಾಗಿರುವ ಖುರೇಷಿಗೆ ಈಗಾಗಲೇ ಚಿಕಿತ್ಸೆ ಕೊಡಿಸುವಲ್ಲಿ ನಿರ್ಲಕ್ಷ ತೋರಲಾಗಿದೆ. ಪೊಲೀಸ್ ದೌರ್ಜನ್ಯದ ಗಾಯಗಳನ್ನು ಈಗಾಗಲೇ ಅಪಘಾತದಿಂದಾದ ಗಾಯಗಳು ಎಂದು ಸುಳ್ಳು ದಾಖಲೆಯನ್ನು ಪೊಲೀಸರು ಸೃಷ್ಟಿಸಿದ್ದಾರೆ.

ಇದೀಗ ಪೊಲೀಸರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮತ್ತಷ್ಟು ಸುಳ್ಳು ದಾಖಲೆಗಳನ್ನು ವೆನ್‌ಲಾಕ್ ಆಸ್ಪತ್ರೆಯ ಮೂಲಕ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಸದ್ಯ ವೆನ್‌ಲಾಕ್ ಆಸ್ಪತ್ರೆಯಲ್ಲಿ ನೀಡಲಾಗುವ ಚಿಕಿತ್ಸೆ ಬಗ್ಗೆ ವಿಶ್ವಾಸವಿಲ್ಲ. ತಕ್ಷಣ ಖುರೇಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕು. ಮಾತ್ರವಲ್ಲದೆ ಆತ ಸಂಪೂರ್ಣವಾಗಿ ಗುಣಮುಖನಾಗುವವರೆಗೆ ಪೊಲೀಸರು ಅವನಿಗೆ ತೊಂದರೆ ನೀಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಲಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News