" ಪೊಲೀಸ್ ದೌರ್ಜನ್ಯದ ವಿರುದ್ಧ ಮಂಗಳೂರು ಚಲೋ ಹೋರಾಟ " : ಎಸ್‌ಡಿಪಿಐ ಎಚ್ಚರಿಕೆ
ಉಡುಪಿ, ಎ.5: ಮಂಗಳೂರಿನ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಸಿಸಿಬಿ ಪೊಲೀಸ್ ಅಧಿಕಾರಿಗಳನ್ನು ಅಮಾನುತಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಕ್ರಮವಾಗಿ ಬಂಧಿಸಲಾಗಿ ರುವ ಪ್ರತಿಭಟನಕಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಪೊಲೀಸ್ ದೌರ್ಜನ್ಯಕ್ಕೊಳಗಾಗಿರುವ ಅಹ್ಮದ್ ಖುರೇಷ್‌ಗೆ ಸೂಕ್ತ ಪರಿಹಾರ ಒದಗಿಸಬೇಕು. ತಪ್ಪಿದಲ್ಲಿ ಮಂಗಳೂರು ಚಲೋ ಹೋರಾಟ ನಡೆಸಲಾಗು ವುದು ಎಂದು ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್ ಬ್ರಹ್ಮಾವರ ಎಚ್ಚರಿಕೆ ನೀಡಿದ್ದಾರೆ.
ಅಮಾಯಕ ಯುವಕನ ಮೇಲೆ ಪೊಲೀಸ್ ದೌರ್ಜನ್ಯ ಹಾಗೂ ನ್ಯಾಯಕ್ಕಾಗಿ ಪ್ರತಿಭಟಿಸಿದವರ ಅಕ್ರಮ ಬಂಧನವನ್ನು ವಿರೋಧಿಸಿ ಉಡುಪಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬುಧವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆ ಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಲ್ಪೆ ಮಾತನಾಡಿ, ಪೊಲೀಸ್ ದೌರ್ಜನ್ಯದಿಂದ ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಅಹ್ಮದ್ ಖುರೇಷ್ ಕುಟುಂಬಕ್ಕೆ ಸರಕಾರ ಒಂದು ಕೋಟಿ ಪರಿಹಾರವನ್ನು ನೀಡಬೇಕು. ಆ ಹಣವನ್ನು ಮಂಗಳೂರು ಪೊಲೀಸ್ ಇಲಾಖೆಯಿಂದ ವಸೂಲಿ ಮಾಡಬೇಕು. ಗೃಹ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಉಡುಪಿ ಕ್ಷೇತ್ರ ಅಧ್ಯಕ್ಷ ನಝೀರ್ ಉಡುಪಿ, ಮುಖಂಡರಾದ ಸಾಧಿಕ್ ಉಡುಪಿ, ಆಲಂ ಬ್ರಹ್ಮಾವರ, ಹನೀಫ್ ಮೂಳೂರು, ಇಲಿಯಾಸ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.