×
Ad

ಹೊಂಡದಿಂದ ಮೇಲಕ್ಕೆತ್ತಿದ್ದ ಪೊಲೀಸ್‌ಗೆ ಬೈಕ್ ಸವಾರನಿಂದ ಹಲ್ಲೆ...!

Update: 2017-04-05 21:55 IST

ಕೊಣಾಜೆ, ಎ.5: ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಬಳಿ ರಸ್ತೆ ಬದಿಯಲಿದ್ದ ಹೊಂಡವೊಂದಕ್ಕೆ ಬಿದ್ದಿದ್ದ ಅಪರಿಚಿತ ಬೈಕ್ ಸವಾರನೊಬ್ಬನನ್ನು ಮೇಲಕ್ಕೆತ್ತಿ ಸಂತೈಸಿದ ಕೊಣಾಜೆ ಠಾಣಾ ಪೋಲೀಸ್ ಕಾನ್‌ಸ್ಟೇಬಲ್‌ಗೆ ಬೈಕ್ ಸವಾರ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಕೊಣಾಜೆ ಪೊಲೀಸ್ ಠಾಣಾ ಕಾನ್‌ಸ್ಟೇಬಲ್ ಆದರ್ಶ್(23)ಅವರು ಬೋಳಿಯಾರಿನಿಂದ ಬೈಕಿನಲ್ಲಿ ಮುಡಿಪು ಕಡೆಗೆ ಬರುತ್ತಿದ್ದ ವೇಳೆ, ಮುಡಿಪುವಿನಿಂದ ಬೋಳಿಯಾರ್ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವ ರಸ್ತೆಬದಿಯಲ್ಲಿದ್ದ ಹೊಂಡವೊಂದಕ್ಕೆ ಬಿದ್ದಿದ್ದನೆನ್ನಲಾಗಿದೆ.

ಇದನ್ನು ಗಮನಿಸಿದ ಪೊಲೀಸ್ ಕಾನ್‌ಸ್ಟೇಬಲ್ ಅವರು ಮಾನವೀಯತೆ ಮೆರೆದು ಹೊಂಡಕ್ಕೆ ಬಿದ್ದ ವ್ಯಕ್ತಿ ಮತ್ತು ಆತನ ಬೈಕನ್ನು ಮೇಲಕ್ಕೆತ್ತಿದ್ದಾರೆ. ಮೇಲಕ್ಕೆ ಎದ್ದ ಬೈಕ್ ಸವಾರ ಏಕಾಏಕಿ ಕುಪಿತಗೊಂಡು ರಸ್ತೆ ಬದಿಯಲ್ಲಿ ಬಾಯ್ತೆರೆದಿರುವ ಹೊಂಡಗಳನ್ನು ನಿಮಗೆ ಮುಚ್ಚಿಸಲು ಸಂಕಟವೇ ಎಂದು ಗದರಿಸಿ ಪೊಲೀಸನ ಕೆನ್ನೆಗೆ ಬಾರಿಸಿ ಹಲ್ಲೆ ನಡೆಸಿ ಬೈಕ್ ಸಮೇತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ರಾತ್ರಿ ವೇಳೆಯಾದುರಿಂದ ಹಲ್ಲೆಗೈದ ಆರೋಪಿಯ ಬೈಕ್ ನಂಬರನ್ನು ಕಂಡುಹಿಡಿಯಲು ಪೇದೆಗೆ ಅಸಾಧ್ಯವಾಗಿತ್ತು. ಆರೋಪಿಯ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News