×
Ad

​ಪೊಲೀಸ್ ದೌರ್ಜನ್ಯ: ಮುಸ್ಲಿಮ್ ಒಕ್ಕೂಟ ಖಂಡನೆ

Update: 2017-04-05 22:00 IST

ಉಡುಪಿ, ಎ.5: ಮಂಗಳೂರಿನಲ್ಲಿ ಅಮಾಯಕ ಅಹ್ಮದ್ ಖುರೇಷ್ ಎಂಬ ವರನ್ನು ಅಕ್ರಮವಾಗಿ ಬಂಧಿಸಿ ಮಾರಣಾಂತಿಕ ದೌರ್ಜನ್ಯ ಎಸಗಿದ ಮಂಗ ಳೂರು ಸಿಸಿಬಿ ಪೊಲೀಸರ ಕೃತ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಯಾವುದೇ ಆರೋಪದಡಿ ಬಂಧಿಸಿದರೂ 24ಗಂಟೆಯೊಳಗೆ ನ್ಯಾಯಾ ಲಯಕ್ಕೆ ಹಾಜರು ಪಡಿಸಬೇಕೆಂಬ ಕಾನೂನನ್ನು ಉಲ್ಲಂಘಿಸಿ ಹಲವು ದಿನಗಳ ಕಾಲ ಅಕ್ರಮವಾಗಿ ಕಸ್ಟಡಿಯಲ್ಲಿಟ್ಟು ಚಿತ್ರಹಿಂಸೆಗೆ ಒಳಪಡಿಸಿದ ಕಮಿಷನ ರೇಟ್‌ನ ನಿರಂಕುಶವಾದಿ ವರ್ತನೆ ಸರಿಯಲ್ಲ ಎಂದು ಒಕ್ಕೂಟ ತಿಳಿಸಿದೆ.

ಇದನ್ನು ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ಮೇಲೆ ಏಕಾಏಕಿ ದಾಳಿ ಮಾಡಿರುವ ಪೊಲೀಸ್ ಪಡೆಯು ಜನಸಾಮಾನ್ಯರಲ್ಲಿ ಭೀತಿಯನ್ನುಂಟು ಮಾಡಿದೆ. ನಾಗರಿಕರ ಸಂವಿಧಾನದತ್ತವಾದ ಹಕ್ಕನ್ನು ಧಮಿನಿಸಲು ಪೊಲೀಸರು ಈ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಮೂಲಕ ಪೊಲೀಸರು ಪೂರ್ವಾಗ್ರಹ ಪೀಡತರಂತೆ ವರ್ತಿಸುತ್ತಿರುವುದು ಸಾಬೀತಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

ಆದುದರಿಂದ ಜಿಲ್ಲಾಡಳಿತ, ಗೃಹ ಇಲಾಖೆ ಮತ್ತು ಸರಕಾರ ಕೂಡಲೇ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರವನ್ನು ಮತ್ತು ರಕ್ಷಣೆ ಯನ್ನು ನೀಡಬೇಕು. ದೌರ್ಜನ್ಯ ಎಸಗಿರುವ ಪೊಲೀಸರನ್ನು ವಜಾಗೊಳಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಮತ್ತು ಬಂಧಿಸಲ್ಪಟ್ಟ ಪ್ರತಿಭಟನಕಾರರನ್ನು ಕೂಡಲೇ ಬಿಡುಗಡೆ ಮಾಡಿ ಅವರ ಮೇಲೆ ಹೂಡಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News