×
Ad

ನಾಗರಿಕ ಹಕ್ಕುಗಳ ದಮನಕ್ಕೆ ಖಂಡನೆ: ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹ

Update: 2017-04-05 22:13 IST

ಮಂಗಳೂರು, ಎ. 5: ಪಿಎಫ್‌ಐ ಸಂಘಟನೆಯ ಪ್ರತಿಭಟನಾ ಧರಣಿಯ ಮೇಲೆ ಮಂಗಳೂರಿನ ಪೋಲಿಸರು ನಡೆಸಿದ ದೌರ್ಜನ್ಯವನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ತೀವ್ರವಾಗಿ ಖಂಡಿಸಿದೆ.

ಇದು ಮಂಗಳೂರಿನ ಪೋಲಿಸರು ನಡೆಸಿದ ಮತ್ತೊಂದು ಹೀನಾಯವಾದ ನಾಗರಿಕ ಹಕ್ಕುಗಳ ದಮನವಾಗಿದೆ ಎನ್ನುವುದನ್ನು ಗಮನಿಸಬೇಕು. ಕೊಲೆ ಪ್ರಕರಣವೊಂದರ ಆರೋಪಿ ಎಂಬ ನೆಪದಲ್ಲಿ, ಪೋಲಿಸರು ಅಹ್ಮದ್ ಖುರೇಷಿ ಎಂಬವರನ್ನು 6 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಅವರ ಮೂತ್ರಪೀಂಡಗಳು ಜರ್ಝರಿತವಾಗುವ ಹಾಗೆ ಹೀನಾಯ ಹಿಂಸೆ ನೀಡಿದ್ದಾರೆಂಬ ವಿದ್ಯಮಾನಕ್ಕೆ ನ್ಯಾಯ ಬೇಡಲು ಜನರು ಮಂಗಳೂರಿನ ಕಮಿಷನರ್ ಕಚೇರಿ ಎದುರು ಪ್ರತಿಭಟನೆಗೆ ಬಂದಿದ್ದರು.

ಜನರ ದೂರನ್ನು ಸಹಾನೂಭೂತಿಯಿಂದ ಕೇಳಿ ತನಿಖೆಗೆ ಆದೇಶಿಸುವುದು ಕಾನೂನು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಖುರೇಷಿಯವರ ದೈಹಿಕ ಸ್ಥಿತಿ ಹಾಗೂ ಅದರ ಹಿನ್ನಲೆಗಳ ಬಗ್ಗೆ ಅವರ ಕುಟುಂಬದವರ ವಿವರಣೆಗಳನ್ನು ಕೇಳಿಸಿಕೊಳ್ಳದ ಕಮಿಷನರ್, ಆರು ದಿನಗಳ ಅಕ್ರಮ ಬಂಧನ-ಹಿಂಸೆಯ ನಂತರ ಆರೋಪಿಯು ನ್ಯಾಯಾಧೀಶರ ಮುಂದೆ ಕೊಟ್ಟ ಹೇಳಿಕೆಯ ಆಧಾರದಲ್ಲಿ ವಿಷಯ ಇತ್ಯಾರ್ಥವಾಗಿದೆ ಎಂಬಂತೆ ವರ್ತಿಸಿರುವುದೂ ವಿವೇಚನಾಹೀನವಾಗಿದೆ ಎಂದು ವೇದಿಕೆ ಹೇಳಿದೆ.

ಪಿಎಫ್‌ಐ ಸಂಘಟನೆಯ ಸಿದ್ಧಾಂತ, ಸಂಘಟನಾ ಮಾದರಿಗಳ ಬಗ್ಗೆ ವೇದಿಕೆಗೆ ಭಿನ್ನಮತಗಳಿವೆ. ಆದರೆ, ಪ್ರಜಾಪ್ರಭುತ್ವ ಸಮಾಜದಲ್ಲಿ, ಎಲ್ಲರಿಗೂ ಇರಬೇಕಾದಂತೆ ಅವರಿಗೂ ಸಂಪೂರ್ಣ ನಾಗರಿಕ ಹಕ್ಕು-ಸ್ವಾತಂತ್ರಗಳಿವೆ. ಅದನ್ನು ಮಂಗಳೂರಿನ ಪೋಲಿಸರು ದಮನಿಸಿದ್ದಾರೆ. ಇದು ಪ್ರಜಾತಂತ್ರ ವಿರೋಧಿ, ಸಂವಿಧಾನ ವಿರೋಧಿ, ನಾಗರಿಕ ಹಕ್ಕು, ಸ್ವಾತಂತ್ರ್ಯಗಳ ವಿರೋಧಿ ಕೃತ್ಯವಾಗಿದೆ ಎಂದು ವೇದಿಕೆ ಪ್ರಕಟನೆಯಲ್ಲಿ ತಿಳಿಸಿದೆ.

ಈಗಾಗಲೇ ಕರಾವಳಿಯಲ್ಲಿ ಮುಸ್ಲಿಮರು ಅಪರಿಮಿತ ಹಿಂಸೆಗೆ ತುತ್ತಾಗಿದ್ದಾರೆ; ಕಾನೂನುಬಾಹಿರ ಶಕ್ತಿಗಳ ಆಟಾಟೋಪವನ್ನು ಕರಾವಳಿಯ ಕಾನೂನುಪಾಲಕರು ನಿಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಪ್ರಸ್ತುತ ಘಟನೆಯು ಕಾನೂನು ಪಾಲಕರು ಸಂವಿಧಾನಬಾಹಿರ ಶಕ್ತಿಗಳ ಮನೋಭಾವವನ್ನೇ ಎತ್ತಿ ಹಿಡಿಯುತ್ತಿದ್ದಾರೆ ಎಂಬ ಭಾವನೆಯು ಗಣನೀಯವಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಬೆಳೆಯುವುದನ್ನು ತಡೆಯುವುದು ಸರಕಾರದ ಹಾಗೂ ಕಾನೂನುಪಾಲಕರ ಕರ್ತವ್ಯವಾಗಿದೆ.

ಆದರೆ, ಸರಕಾರವೇ ಸಾರ್ವಜನಿಕ ಅಶಾಂತಿಗೆ ಕಾರಣವಾಗುತ್ತಿದೆ ಎನ್ನುವುದು ಆತಂಕಕಾರಿ. ಖುರೇಷಿಯವರ ಅಕ್ರಮ ಬಂಧನ, ಹಿಂಸೆ ಹಾಗೂ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಯ ಬೇಕೆಂದು ವೇದಿಕೆಯು ಗೃಹ ಸಚಿವಾಲಯವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News