ಆಳ್ವಾಸ್ ಕಾಲೇಜು ಚಾಂಪಿಯನ್, ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ

Update: 2017-04-05 18:43 GMT

ಕೊಣಾಜೆ, ಎ.5: ಮಂಗಳೂರು ವಿವಿಯಲ್ಲಿ ಬುಧವಾರ ನಡೆದ ದರ್ಪಣ ಕಾರ್ಯಕ್ರಮದಲ್ಲಿ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದ ಕ್ರೀಡಾಕೂಟ, ಅಂತರ್ ಕಾಲೇಜು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದ ಮಂಗಳೂರು ವಿವಿ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.

ಅಂತರ್ ವಿವಿ ಮಟ್ಟದ ಕ್ರೀಡಾ ಸಾಧನೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದರೆ, ಉಜಿರೆಯ ಎಸ್‌ಡಿಎಂ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದು, ಮಂಗಳೂರು ವಿವಿ ಕ್ಯಾಂಪಸ್ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಕಾರ್ಯಕ್ರಮವನ್ನು ಅಥ್ಲೆಟಿಕ್ಸ್ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತೆ ವಂದನಾ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಲವಾರು ಅವ ಕಾಶ, ಪ್ರೋತ್ಸಾಹಗಳು ಸಿಗುತ್ತಿದ್ದು, ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿದರು.

ಈ ಸಂದರ್ಭ ಬೆಳ್ತಂಗಡಿಯ ಯೋಧ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ, ಅರ್ಜುನ ಪ್ರಶಸ್ತಿ ಪುರಸ್ಕೃತೆ ವಂದನಾ ರಾವ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ್ ಆಳ್ವ, ಆಳ್ವಾಸ್ ಕಾಲೇಜಿನ ಬಾಲಕೃಷ್ಣ ಆಳ್ವ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಾದ ಕಾವ್ಯಾ ಎಂ.ಆರ್., ರಂಜಿತಾ ಎಂ., ಪೂರ್ಣಿಮಾ ಕೆ. ಅಂತಾ ರಾಷ್ಟ್ರೀಯ ಈಜುಪಟು ವೈಷ್ಣವ್ ಹೆಗ್ಡೆ ಮುಂತಾ ದವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಂತರ್ ಕಾಲೇಜು ಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆೆಗೈದ ಕ್ರೀಡಾಪಟುಗಳನ್ನು ನಗದು ಪುರಸ್ಕಾರದೊಂದಿಗೆ ವಿಶೇಷವಾಗಿ ಗೌರವಿಸಲಾಯಿತು. 

ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಳ್ವಾಸ್ ಮೂಡಬಿದಿರೆ ಕಾಲೇಜು ತಂಡವು ಪ್ರಥಮ ಸ್ಥಾನದೊಂದಿಗೆ 50 ಸಾವಿರ ನಗದು ಮತ್ತು ಪ್ರಶಸ್ತಿ, ಎಸ್‌ಡಿಎಂ ಉಜಿರೆ ದ್ವಿತೀಯ ಸ್ಥಾನದೊಂದಿಗೆ 40 ಸಾವಿರ ನಗದು ಮತ್ತು ಪ್ರಶಸ್ತಿ, ಕುಂದಾಪುರದ ಬಸ್ರೂರು ಭುಜಂಗ ಹೆಗ್ಡೆ ಕಾಲೇಜು ಹಾಗೂ ಗೋವಿಂದದಾಸ್ ಕಾಲೇಜು ಸುರತ್ಕಲ್ ತೃತೀಯ ಸ್ಥಾನವನ್ನು ಪಡೆದು 40 ಸಾವಿರ ನಗದು ಮತ್ತು ಪ್ರಶಸ್ತಿ ಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಸಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ. ಎಂ.ಲೋಕೇಶ್, ಪರಿಕ್ಷಾಂಗ ಕುಲಸಚಿವ ಎ.ಎಂ.ಖಾನ್, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಉದಯ ಬಾರ್ಕೂರು , ದೈಹಿಕ ಶಿಕ್ಷಣ ವಿಭಾಗದ ಜೆರಾಲ್ಡ್ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಮಧು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News