'ಕಮಿಷನರ್‌ರವರ ಮಂಪರು ಪರೀಕ್ಷೆ ನಡೆಸಲಿ'
ಪುತ್ತೂರು, ಎ.5: ಜಿಲ್ಲೆಯಲ್ಲಿ ಕಮಿಷನರ್ ಅವರು ಅಂಬೇಡ್ಕರ್ ನಿರ್ಮಿಸಿದ ಸಂವಿಧಾನದ ಬದಲು ತನ್ನ ಸಂವಿಧಾನವನ್ನು ಜಾರಿಗೊಳಿಸುತ್ತಿದ್ದಾರೆ. ಕಮಿಷನರ್‌ರ ಸಂವಿಧಾನ ನಮಗೆ ಬೇಕಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಸಿದ ಕಮಿಷನರ್ ಚಂದ್ರಶೇಖರ್ ಅವರನ್ನು 12 ಗಂಟೆಗಳ ಒಳಗಾಗಿ ಅಮಾನತುಗೊಳಿಸಬೇಕು ಮತ್ತು ಅವರ ಮಂಪರು ಪರೀಕ್ಷೆ ನಡೆಸಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಎಂ. ಕೂಸಪ್ಪ ಒತ್ತಾಯಿಸಿದರು. ಅಮಾಯಕ ಯುವಕನ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ವಿರುದ್ಧ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಕಮಿಷನರ್ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯ ವೇಳೆ ನಡೆದ ಲಾಠಿ ಚಾರ್ಜ್ ಹಾಗೂ ಅಕ್ರಮ ಬಂಧನದ ವಿರುದ್ದ ಬುಧವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿಯಲ್ಲಿ ಪಿಎಫ್‌ಐ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಪೊಲೀಸರು ಬಸ್ಸಿಗೆ ಲಾಠಿಯಿಂದ ಬಡಿದು ಹಾನಿಗೊಳಿಸಿ ಬಳಿಕ ಅದನ್ನು ಪ್ರತಿಭಟನಾಕಾರರ ತಲೆಗೆ ಕಟ್ಟಿದ್ದಾರೆ. ಈ ಬಗ್ಗೆ ಸರಕಾರ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ರಾಜ್ಯದ ಗೃಹ ಸಚಿವರಿಗೆ ಜಿಲ್ಲೆಯ ಜನತೆಯ ಮೇಲೆ ಅಲ್ಪವಾದರೂ ಕಾಳಜಿಯಿದ್ದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ ಕಮಿಷನರ್ ಅವರನ್ನು ಅಮಾನತುಗೊಳಿಸಬೇಕು. ಅವರನ್ನು ಮಂಪರು ಪರೀಕ್ಷೆ ನಡೆಸಿ ಸತ್ಯವನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವಿಚಾರದಲ್ಲಿ ಪಿಎಫ್‌ಐ ಜೊತೆ ದಲಿತರೂ ಸೇರಿಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಆಲ್ ಇಂಡಿಯಾ ಇಮಾಮ್ಸ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಪಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಶಾಫಿ ಬೆಳ್ಳಾರೆ ಮಾತನಾಡಿದರು. ಪ್ರತಿಭಟನೆಯಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಉಮರ್ ಸುಳ್ಯ, ಎಸ್‌ಡಿಪಿಐ ದ.ಕ ಜಿಲ್ಲಾ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್ ಕೆ.ಎ, ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪ್ರಮುಖರಾದ ಎಂ.ಎ ರಫೀಕ್ ಸವಣೂರು, ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಕಾರ್ಯದರ್ಶಿ ಜಾಬೀರ್ ಅರಿಯಡ್ಕ, ಎಸ್‌ಡಿಟಿಯು ತಾಲೂಕು ಅಧ್ಯಕ್ಷ ಬಾತಿಷ ಬಡೆಕ್ಕೋಡಿ, ಪ್ರಮುಖರಾದ ಹಂಝ ಅಫ್ನಾನ್, ಅಶ್ರಫ್ ಬಾವು ಪಡೀಲ್ ಮತ್ತಿತರರು ಇದ್ದರು.
ಪಿಎಫ್‌ಐ ಪುತ್ತೂರು ತಾಲೂಕು ಅಧ್ಯಕ್ಷ ಅಬೂಬಕರ್ ರಿಝ್ವನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಂಸುದ್ದೀನ್ ಸ್ವಾಗತಿಸಿದರು.