ಕುಡಿಯುವ ನೀರು ಪೂರೈಕೆಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಆಗ್ರಹ
ಸುಳ್ಯ, ಎ.5: ಸುಳ್ಯ ತಾಲೂಕಿನ ಅಮರಮೂಡ್ನೂರು ಗ್ರಾಮ ಪಂಚಾಯತ್‌ನಲ್ಲಿ ವಾಟರ್ ಮ್ಯಾನ್ ಮತ್ತು ಒಂದು ಕುಟುಂಬದ ವೈಮನಸ್ಸಿನಿಂದ ಆ ವ್ಯಾಪ್ತಿಯ ಸುಮಾರು 60 ಕುಟುಂಬಗಳು ಕಳೆದ 2 ದಿನಗಳಿಂದ ಕುಡಿಯಲು ನೀರು ಇಲ್ಲದೆ ಪರದಾಡುತ್ತಿದ್ದಾರೆ ಎಂದು ತಾಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಆಕ್ರೋಶ ವ್ಯಕ್ತ್ತಪಡಿಸಿದ್ದಾರೆ.
ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆೆಯಲ್ಲಿ ಅವರು ಮಾತನಾಡಿದರು.
ಅಮರಮೂಡ್ನೂರು ಗ್ರಾಮದ ಮೂಡೆಕಲ್ಲು ಎಂಬಲ್ಲಿ ವಾಟರ್‌ಮ್ಯಾನ್, ನೀರು ಸರಬರಾಜು ಮಾಡಲು ತೆರಳಿದಾಗ ಸ್ಥಳೀಯ ಮಹಿಳೆಯೋರ್ವರು ಮೈಮನಸ್ಸಿನಿಂದ ಸುಳ್ಯ ಠಾಣೆಯಲ್ಲಿ ಸುಳ್ಳು ಮಾನಹಾನಿ ಕೇಸು ನೀಡಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿದ್ದಾರೆ. ಅಲ್ಲದೇ ಪಂಚಾಯತ್ ಪಿಡಿಒ ಕೂಡ ತಾಪಂ ಇಒಗಳಿಗೆ ವೌಖಿಕವಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳೀಯರು ನೀರಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಲೂಕು ಆಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡಿದ ತಾಪಂ ಸಿಇಒ ಮಧುಕುಮಾರ್, ಈ ಬಗ್ಗೆ ಅಲ್ಲಿನ ಪಿಡಿಒ ಮತ್ತು ಅಧಿಕಾರಿಗಳಿಗೆ ವರದಿ ನೀಡಲು ತಿಳಿಸಿದ್ದೇನೆ ಎಂದರು.
ಈ ಸಮಸ್ಯೆಯನ್ನು ಇಂದೇ ಬಗೆಹರಿಸಬೇಕು ಎಂದು ತಾಪಂ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಅಲ್ಲದೇ ನದಿಪಾತ್ರಗಳಲ್ಲಿ ದಿನದ 24 ಗಂಟೆ ಚಾಲು ಆಗುತ್ತಿರುವಂತಹ 10 ಎಚ್.ಪಿ ಪಂಪ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದರು. ಸರಕಾರಿ ಬೋರ್‌ವೆಲ್ ಕೊರೆದ 500 ಮೀ. ಸುತ್ತಳತೆಯಲ್ಲಿ ಖಾಸಗಿಯವರು ಬೋರ್‌ವೆಲ್‌ಗಳು ಕೊರೆಯಬಾರದು ಎನ್ನುವ ಸರಕಾರದ ಸುತ್ತೋಲೆ ಇದ್ದರೂ ಹಲವಾರು ಬೋರ್‌ವೆಲ್‌ಗಳನ್ನು ಕೊರೆಯಲಾಗುತ್ತಿದೆ. ಇದನ್ನು ತಡೆಯುವ ಕಾನೂನು ಯಾರ ವ್ಯಾಪ್ತಿಗೆ ಬರುತ್ತದೆ ಎಂದವರು ಪ್ರಶ್ನಿಸಿದರು. ಬೋರ್‌ವೆಲ್ ಕೊರೆಯಲು ಎನ್.ಒ.ಸಿ ಕೊಟ್ಟವರು ಪೊಲೀಸ್ ಸಹಕಾರದಲ್ಲಿ ನಿಲ್ಲಿಸಲು ಅಧಿಕಾರ ಇದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳಿದರು. ಖಾಸಗಿ ಬೋರ್‌ವೆಲ್‌ನವರು ಸರಕಾರಕ್ಕೆ ಕುಡಿಯುವ ನೀರು ಕೊಟ್ಟರೆ ಸರಕಾರದಿಂದ ಅವರಿಗೆ ತಿಂಗಳಿಗೆ 18,000 ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು. ಸುಳ್ಯ ತಾಲೂಕಿನ ಪಶು ಸಂಗೋಪನೆ ಇಲಾಖೆಯಲ್ಲಿ ಕೇವಲ 3 ವೈದ್ಯರಿದ್ದಾರೆ. ಅಲ್ಲದೆ ಕೆಲವು ಬ್ಯಾಂಕ್‌ಗಳು ಪಶು ಸಾಕಣೆೆಗೆ ಸಾಲ ನೀಡುತ್ತಿಲ್ಲ. ಸರಕಾರದ ಕಾನೂನಿನ ಸುತ್ತೋಲೆ ಇದ್ದರೂ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ ಎಂದು ಪಶು ವೈದ್ಯಾಧಿಕಾರಿ ಹೇಳಿದರು. ಇದಕ್ಕೆ ಉತ್ತರಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷರು ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ನಿಯಮ ಒಂದೇ. ಆದರೆ ಕೆಲವು ಬ್ಯಾಂಕ್ ಸಾಲ ನೀಡಲು ಹಿಂದೇಟು ಹಾಕುತ್ತಿವೆ. ಇದನ್ನು ಬ್ಯಾಂಕ್‌ರ್ಸ್‌ಗಳ ಸಭೆೆಯಲ್ಲಿ ಅಧಿಕಾರಿಗಳು ಪ್ರಸ್ತಾವಿಸಬೇಕು ಎಂದು ಹೇಳಿದರು. ತಾಲೂಕಿನಲ್ಲಿ ಕಲ್ಲು ಮತ್ತು ಮರಳು ಸಾಗಾಟ ಮಾಡುವ ಲಾರಿಗಳಿಂದ ಹಣ ವಸೂಲಿ ಮಾಡುವ ಕಾಯಕವನ್ನು ಇಲಾಖೆಯ ವಾಹನದ ಚಾಲಕರು, ಕ್ಲರ್ಕ್‌ಗಳು ಮಾಡುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಹೇಳಿದರು.
ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.