ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಪಿಯುಸಿಎಲ್ ಖಂಡನೆ
ಮಂಗಳೂರು, ಎ.6: ಸಿಸಿಬಿ ಪೊಲೀಸರು ಮುಹಮ್ಮದ್ ಖುರೇಷಿ ಮೇಲೆ ನಡೆಸಿದ ದೌರ್ಜನ್ಯವನ್ನು ಪಿಯುಸಿಎಲ್ ದ.ಕ.ಜಿಲ್ಲಾ ಘಟಕ ಖಂಡಿಸಿದೆ.
ಪೊಲೀಸರು 1 ವಾರಗಳ ಕಾಲ ಖುರೇಷಿಯನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಇದರಿಂದ ಆತನ 2 ಕಿಡ್ನಿ ನಿಷ್ಕ್ರಿಯವಾಗಿದೆ. ಖುರೇಷಿ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮ ಜರಗಿಸಬೇಕಾಗಿದ್ದ ಆಯುಕ್ತ ಚಂದ್ರಶೇಖರ್, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಜಾರ್ಜ್ ಮಾಡಿರುವುದು ಖಂಡನೀಯ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆಯುಕ್ತರ ಹೇಳಿಕೆಯೂ ಸುಳ್ಳು ಎಂದಿರುವ ಕಬೀರ್ ಉಳ್ಳಾಲ್, ಖುರೇಷಿಯ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಪ್ರತಿಭಟನಾ ನಿರತರ ವಿರುದ್ಧ ದಾಖಲಿಸಿರುವ ಕೇಸನ್ನು ಹಿಂದಕ್ಕೆ ಪಡೆಯಬೇಕು, ಪೊಲೀಸ್ ಆಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಕೂಡ ಪೊಲೀಸರು ಮುಹಮ್ಮದ್ ಇಕ್ಬಾಲ್ ಎಂಬಾತನನ್ನೂ ಕೂಡ ಇದೇ ರೀತಿ ಅಕ್ರಮಾಗಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಲ್ಲದೆ, ಆತನ ಮೃತದೇಹವನ್ನು ವೆನ್ಲಾಕ್‌ಗೆ ಕೊಂಡೊಯ್ದು ಬಸ್ಸಿನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಸುಳ್ಳು ಮಾಹಿತಿ ನೀಡಿದ್ದರು ಎಂದು ಪಿಯುಸಿಎಲ್ ಜಿಲ್ಲಾಧ್ಯಕ್ಷ ಕಬೀರ್ ಉಳ್ಳಾಲ್ ಆರೋಪಿಸಿದ್ದಾರೆ.