ಅಹ್ಮದ್ ಖುರೇಷಿ ಮೇಲೆ ಹಲ್ಲೆ: ನ್ಯಾಯಾಂಗ ತನಿಖೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆಗ್ರಹ

Update: 2017-04-06 13:44 GMT

ಹೊಸದಿಲ್ಲಿ, ಎ. 6: ಮಂಗಳೂರಿನ ಅಹ್ಮದ್ ಖುರೇಶಿ ಎಂಬ ಯುವಕನ ಮೇಲೆ ಹಲ್ಲೆ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನನ್ನು ಆರೆಸೆಸ್ಸ್ ಕೈಗೆತ್ತಿಕೊಂಡಂತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಕಾರದ ಹಿಡಿತದಲ್ಲಿ ಇಲ್ಲ ಎಂಬುದು ಸ್ಪಷ್ಟ. ಮಂಗಳೂರಿನ ಅಹ್ಮದ್ ಖುರೇಶಿ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮರಳು ದಂಧೆಕೋರರು ಉಡುಪಿ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ಹತ್ಯೆ ಯತ್ನ ನಡೆಸುತ್ತಾರೆಂದರೆ ರಾಜ್ಯದಲ್ಲಿ ಯಾವ ರೀತಿಯ ಕಾನೂನಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ದೇವೇಗೌಡ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸ್ಪರ್ಧಿಸಿಲ್ಲ ಎಂಬುದು ಸುಳ್ಳು:

ಉಪ ಚುನಾವಣೆಯಲ್ಲಿ ಅಭ್ಯರ್ಥಿ ನಿಲ್ಲಿಸಿಲ್ಲ. ಯಾರಿಗೋ ಸಹಾಯ ಮಾಡಲು ಸ್ಪರ್ಧಿಸಿಲ್ಲ ಎಂಬುದು ಸುಳ್ಳು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ದೇವೇಗೌಡ ಸ್ಪಷ್ಟಪಡಿಸಿದರು.

ಉಪ ಚುನಾವಣೆಯಲ್ಲಿ ಪೈಪೋಟಿಯ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಹಣವನ್ನು ಖರ್ಚು ಮಾಡುತ್ತಿವೆ. ಇಂತಹ ಸ್ಥಿತಿಯಲ್ಲಿ ಚುನಾವಣಾ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ದೇವೇಗೌಡ, ಈ ಬಾರಿ ಲೋಕಸಭೆ ಅಧಿವೇಶನದಲ್ಲಿ ಹೆಚ್ಚು ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಜನಾದೇಶಕ್ಕೆ ಎಲ್ಲರೂ ತಲೆಬಾಗಬೇಕು. ಇವಿಎಂ ಯಂತ್ರಗಳ ಬಗ್ಗೆ ತನಗೆ ಹೆಚ್ಚು ಅನುಭವವಿಲ್ಲ. ಜನತೆ ಬುದ್ದಿವಂತರಿದ್ದು, ಬೆಳಗಾವಿಯ ವಿ.ಎಸ್.ಕೌಜಲಗಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ 268 ಮಂದಿ ಸ್ಪರ್ಧಿಸಿದ್ದರು. ಆದರೂ, ಕೌಜಲಗಿ ಬ್ಯಾಲೆಟ್ ಪೇಪರ್ ಮತದಾನದಲ್ಲಿ ಗೆದ್ದರು, ಸೋತೆವು ಎಂದು ಸಬೂಬು ಹೇಳುವುದು ಸಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪಾರದರ್ಶಕ ಚುನಾವಣೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದು, ಅವರು ಆ ದಾರಿಯಲ್ಲಿ ಸಾಗುವುದಾದರೆ ತಾನು ಸ್ವಾಗತಿಸುವೆ, ಮಾತ್ರವಲ್ಲ, ಹೆಚ್ಚು ಸಂತೋಷ ಪಡುತ್ತೇನೆ ಎಂದು ದೇವೇಗೌಡ ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News