ಕೊಳವೆ ಬಾವಿಗೆ ಬಿದ್ದ ಬಾಲಕ
ರಾಜ್‌ಕೋಟ್, ಎ.6: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಕರ್ಸಾಂಗದ ಗ್ರಾಮದ ಲ್ಲಿ ತೆರೆದ ಕೊಳವೆ ಬಾವಿಯೊಳಗೆ 4 ವರ್ಷದ ಬಾಲಕನೋರ್ವ ಜಾರಿ ಬಿದ್ದಿದ್ದು , ಗುರುವಾರ ಮಧ್ಯಾಹ್ನದಿಂದ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಗುರುವಾರ ಮಧ್ಯಾಹ್ನ ಸುಮಾರು 1:30ರ ವೇಳೆ ಸಾಗರ್ ದೇವಿಪೂಜಕ್ ಎಂಬ ಬಾಲಕ ಕೊಳವೆ ಬಾವಿಯೊಳಗೆ ಬಿದ್ದ ಬಗ್ಗೆ ಮಾಹಿತಿ ದೊರೆತಿದೆ. ಕೊಳವೆ ಬಾವಿಯಲ್ಲಿ ಸುಮಾರು 150 ಅಡಿ ಆಳದಲ್ಲಿ ಈತ ಸಿಲುಕಿಕೊಂಡಿರುವ ಸಾಧ್ಯತೆಯಿದೆ. ಆತನ ಚೀರಾಟ ಮೇಲಕ್ಕೂ ಕೇಳಿಸುತ್ತಿದೆ. ವೈದ್ಯರ ತಂಡವೊಂದು ಸ್ಥಳಕ್ಕೆ ಧಾವಿಸಿದ್ದು ಕೊಳವೆ ಬಾವಿಯೊಳಗೆ ಆಮ್ಲಜನಕ ಪೂರೈಸುವ ಕಾರ್ಯದಲ್ಲಿ ತೊಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುರೇಂದ್ರನಗರ ನಗರಪಾಲಿಕೆಯ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಹಾಯ ಕೋರಲಾಗಿದೆ . 400 ಅಡಿ ಆಳದ ಈ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಪಂಪ್ ಅನ್ನು ಹೊರತೆಗೆದಿದ್ದ ಕಾರಣ ಘಟನೆ ಸಂಭವಿಸಿದೆ. ಶೀಘ್ರ ಬಾಲಕನನ್ನು ರಕ್ಷಿಸುವ ಉದ್ದೇಶದಿಂದ ಪ್ರಯತ್ನ ನಡೆಲಾಗುತ್ತಿದೆ ಎಂದವರು ತಿಳಿಸಿದ್ದಾರೆ.