ವಿವಾದಗಳ ನಡುವೆಯೇ ತನ್ನ ಉತ್ತರಾಧಿಕಾರಿಯಾಗಿ ಪುತ್ರನನ್ನು ಘೋಷಿಸಿದ ಅಜ್ಮೀರ್ ದರ್ಗಾದ ಮುಖ್ಯಸ್ಥ
ಅಜ್ಮೀರ್,ಎ.6: ಅಜ್ಮೀರ್ ದರ್ಗಾದ ದೀವಾನ್ (ಮುಖ್ಯಸ್ಥ) ಸೈಯದ್ ಝೈನುಲ್ ಅಬೆದಿನ್ ಅಲಿ ಖಾನ್ ಅವರು ಪುತ್ರ ಸೈಯದ್ ನಾಸಿರುದ್ದೀನ್ ಅವರನ್ನು ತನ್ನ ಉತ್ತರಾಧಿಕಾರಿಯೆಂದು ಗುರುವಾರ ಘೋಷಿಸಿದ್ದಾರೆ. ತನ್ಮೂಲಕ ತನ್ನ ಕಿರಿಯ ಸೋದರ ಸೈಯದ್ ಅಲ್ಲಾವುದ್ದೀನ್ ಅಲಿಮಿ ಅವರಿಂದ ಹುದ್ದೆಯಿಂದ ತನ್ನ ಅಮಾನತಿನಿಂದ ಉಂಟಾಗಿದ್ದ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.
ಸೋಮವಾರ 805ನೇ ವಾರ್ಷಿಕ ಉರೂಸ್‌ನ ಸಮಾರೋಪ ಸಮಾರಂಭದಲ್ಲಿ ತ್ರಿವಳಿ ತಲಾಕ್ ಕುರಿತಂತೆ ಖಾನ್ ಅವರು ಹೇಳಿಕೆ ನೀಡಿದ ಬಳಿಕ ಅವರು ‘ಮುಸ್ಲಿಂ ಅಲ್ಲ ’ ಎಂದು ಅಲಿಮಿ ಘೋಷಿಸಿದ್ದರು.
ತ್ರಿವಳಿ ತಲಾಕ್ ಉಚ್ಚರಿಸುವುದು ಇಸ್ಲಾಮ್‌ಗೆ ಅನುಗುಣವಾಗಿಲ್ಲ ಎಂದು ಖಾನ್ ಹೇಳಿದ್ದರು. ಸಂಧಾನ ಮಾತುಕತೆಗಳ ನಡುವೆ 90 ದಿನಗಳ ಅವಧಿಯಲ್ಲಿ ಒಂದಾದ ನಂತರ ಒಂದರಂತೆ ತಲಾಕ್ ಹೇಳಬೇಕಾಗುತ್ತದೆ ಎಂದಿದ್ದರು.
ಖಾನ್ ಅವರ ಈ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಅಲಿಮಿ ಮುಫ್ತಿಗಳ ಅಭಿಪ್ರಾಯ ಕೋರಿದ್ದು, ಖಾನ್ ಕುರ್‌ಆನ್‌ನ ಪಥದಿಂದ ವಿಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದ್ದರೆನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ಅಲಿಮಿ ತನ್ನನ್ನು ದರ್ಗಾದ ಮುಖ್ಯಸ್ಥನಾಗಿ ಘೋಷಿಸಿಕೊಂಡಿದ್ದರು.