ಡಿಸಿ ಕೊಲೆ ಯತ್ನ ಪ್ರಕರಣ: ಇನ್ನೂ ಆರು ಮಂದಿಯ ಬಂಧನ
ಉಡುಪಿ, ಎ.6: ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳ ಮೇಲಿನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಇಂದು ಇನ್ನೂ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಕಂಡ್ಲೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಮಂದಿಯನ್ನು ಬಂಧಿಸಿದಂತಾಗಿದೆ.
ಬಂಧಿತರನ್ನು ಉತ್ತರ ಪ್ರದೇಶ ಮೂಲದ ಮರಳು ಕಾರ್ಮಿಕರಾದ ಗೋರಕನಾಥ್ (40), ಭೂಥಾನಿ (54), ಅನಿಲ್ (25), ಸರವನ್‌ಕುಮಾರ್ (25), ಧಾರವಾಡದ ರವಿ (27) ಹಾಗೂ ಕಂಡ್ಲೂರಿನ ಇನಾಯತುಲ್ಲಾ (22) ಎಂದು ಗುರುತಿಸಲಾಗಿದೆ. ಇವರಲ್ಲಿ ಮೊದಲ ಐವರನ್ನು ಇಂದು ಬೆಳಗಿನ ಜಾವ ಹಾಗೂ ಕೊನೆಯವನನ್ನು ಸಂಜೆಯ ವೇಳೆ ಕಂಡ್ಲೂರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಶಕ್ಕೆ ಪಡೆದವರನ್ನು ಕುಂದಾಪುರ ಪೊಲೀಸರು ಉಡುಪಿ ನಗರ ಠಾಣೆಗೆ ಒಪ್ಪಿಸಿದ್ದು, ನಾಳೆ ಅವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗುವುದು ಎಂದು ತಿಳಿದುಬಂದಿದೆ. ಇದುವರೆಗೆ ಸುಮಾರು 1.5 ಲಕ್ಷ ರೂ.ವೌಲ್ಯದ 36 ಲೋಡ್ ಮರಳು ಹಾಗೂ 10 ಲಕ್ಷ ರೂ.ವೌಲ್ಯದ ಎಂಟು ಬೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ಕಾರ್ಯಾಚರಿಸುತಿದ್ದ ಅಕ್ರಮ ಮರಳುಗಾರಿಕೆ ಇದೀಗ ಸಂಪೂರ್ಣ ಸ್ತಬ್ಧವಾಗಿದೆ. ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಮೂಲಗಳು ತಿಳಿಸಿದೆ.