×
Ad

ಸಿಸಿಬಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಪಿಎಫ್‌ಐ ಒತ್ತಾಯ

Update: 2017-04-06 21:18 IST

ಮಂಗಳೂರು, ಎ.6: ಅಹ್ಮದ್ ಖುರೇಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಿಸಿಬಿ ಇನ್ಸ್‌ಪೆಕ್ಟರ್ ಸುನೀಲ್ ನಾಯ್ಕ್, ಸಬ್ ಇನ್ಸ್‌ಪೆಕ್ಟರ್ ಶಾಂ ಸುಂದರ್ ಸೇರಿದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಎ.ಕೆ. ಒತ್ತಾಯಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೌರ್ಜನ್ಯಕ್ಕೀಡಾಗಿ ಕಿಡ್ನಿಯನ್ನು ಕಳೆದುಕೊಂಡಿರುವ ಖುರೇಶಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.

 ಪೊಲೀಸ್ ದೌರ್ಜನ್ಯ, ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದವರ ಮೇಲೆ ಲಾಠಿಚಾರ್ಜ್‌ನಂತಹ ಕಾನೂನುಬಾಹಿರ ಘಟನೆಗಳು ನಡೆದಿದ್ದರೂ ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವ್ಯವಸ್ಥೆ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸರಕಾರವಾಗಲಿ ಈವರೆಗೂ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿರುವುದು ಕಳವಳಕಾರಿಯಾಗಿದೆ. ಘಟನೆಗಳಿಗೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತರು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದು, ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಉಗ್ರ ಹೋರಾಟವನ್ನು ನಡೆಸುವುದಾಗಿ ಅಶ್ರಫ್ ಎಚ್ಚರಿಕೆ ನೀಡಿದರು.

ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಹನೀಫ್ ಬೆಳ್ಳಾರೆ ಮಾತನಾಡಿ, ಪೊಲೀಸರು ಖುರೇಶಿಯನ್ನು ವಶಕ್ಕೆ ಪಡೆದಿದ್ದರೂ ವಿಳಂಬವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಗೆ ಜೈಲ್‌ನಲ್ಲಿ ರಕ್ತ ವಾಂತಿಯಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಿರುವುದರಿಂದ ದೌರ್ಜನ್ಯದ ಗಂಭೀರತೆ ಬೆಳಕಿಗೆ ಬಂದಿದೆ. ಖುರೇಶಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ಸಿರಾಜ್ ಕಾವೂರು, ಜಿಲ್ಲಾ ಸಮಿತಿ ಸದಸ್ಯ ಹಾಜಿ ಅಬೂಬಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News