ಹೈಟೆನ್ಷನ್ ತಂತಿ ತಗುಲಿ ಓರ್ವ ಮೃತ್ಯು ; ಇನ್ನೋರ್ವನಿಗೆ ಗಂಭೀರ ಗಾಯ
Update: 2017-04-06 21:38 IST
ಮಂಗಳೂರು, ಎ.6: ರಸ್ತೆಯ ಮೇಲೆ ಹಾದುಹೋಗಿರುವ ಹೈಟೆನ್ಷನ್ ವಯರ್ ತಾಗಿ ಯುವಕನೋರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಕೃಷ್ಣಾಪುರ 7ನೆ ಬ್ಲಾಕ್‌ನ ನಿವಾಸಿ ಇಬ್ರಾಹೀಂ (25) ಎಂದು ಗುರುತಿಸಲಾಗಿದೆ. ಕೃಷ್ಣಾಪುರ 6ನೆ ಬ್ಲಾಕ್ ನಿವಾಸಿ ನಝೀರ್ ಗಂಭೀರ ಗಾಯಗೊಂಡಾತ.
ಇಬ್ರಾಹೀಂ ಮತ್ತು ನಝೀರ್ ಕೃಷ್ಣಾಪುರದ 7ನೆ ಬ್ಲಾಕ್‌ನಲ್ಲಿ ಮೊಬೈಲ್ ಅಂಗಡಿಯೊಂದನ್ನು ನಡೆಸುತ್ತಿದ್ದು, ಅಂಗಡಿಗೆ ಬೋರ್ಡ್ ಅಳವಡಿಸಲು ಹತ್ತಿರ ವಸತಿ ಸಮುಚ್ಚಯದ ಮೇಲೆ ಹತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದುಹೋದ ಹೈಟೆನ್ಷನ್ ವಯರ್ ಸ್ಪರ್ಶಿಸಿದ ಪರಿಣಾದ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ಪೈಕಿ ಇಬ್ರಾಹೀಂ ಮೃತಪಟ್ಟಿದ್ದಾರೆ. ಇಬ್ರಾಹೀಂ ಅವರ ಮೃತದೇಹವು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿಡಲಾಗಿದೆ.