×
Ad

ಉಪ್ಪಿನಂಗಡಿ: ಕಂಟೈನರ್ ಲಾರಿ ಅಡ್ಡಗಟ್ಟಿ ಲಕ್ಷಾಂತರ ರೂಪಾಯಿ ದರೋಡೆ

Update: 2017-04-06 21:57 IST

ಉಪ್ಪಿನಂಗಡಿ, ಎ.6: ಕಂಟೈನರ್ ಲಾರಿಯೊಂದನ್ನು ಅಡ್ಡಗಟ್ಟಿದ ದರೋಡೆಕೋರರ ತಂಡವೊಂದು ಲಾರಿಯಲ್ಲಿದ್ದವರನ್ನು ಬೆದರಿಸಿ ಅವರಿಂದ ಮೊಬೈಲ್ ಹಾಗೂ ಲಕ್ಷಾಂತರ ರೂ. ನಗದನ್ನು ದರೋಡೆಗೈದು ಪರಾರಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗಡಿ ಬಳಿ ಗುರುವಾರ ನಸುಕಿನ ಜಾವ ನಡೆದಿದೆ.

ದರೋಡೆಕೋರರು ಲಾರಿಯಲ್ಲಿದ್ದ ಸುಮಾರು 5ರಿಂದ 6 ಲಕ್ಷ ರೂ.ನ ಹಣದ ಕಟ್ಟು ಹಾಗೂ ಚಾಲಕನ ಕಿಸೆಯಲ್ಲಿದ್ದ 15 ಸಾವಿರ ರೂ., ನಾಲ್ಕು ಮೊಬೈಲ್‌ಗಳನ್ನು ದರೋಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಚೆನ್ನೈಗೆ ಮೀನು ಕೊಂಡು ಹೋಗಿದ್ದ ಕಂಟೈನರ್ ಲಾರಿಯೊಂದು ಗಂಗೊಳ್ಳಿಗೆ ವಾಪಸ್ಸಾಗುತ್ತಿದ್ದ ಸಂದಭರ್ ಈ ಘಟನೆ ನಡೆದಿದೆ. ಶಿರಾಡಿ ಘಾಟಿಯಿಂದಲೇ ಕಪ್ಪುಇನ್ನೋವಾ ಕಾರೊಂದು ಲಾರಿಯನ್ನು ಹಿಂಬಾಲಿಸುತ್ತಾ ಬಂದಿದ್ದು, ನಸುಕಿನ ಜಾವ 2ರಿಂದ 2:30ರ ಸುಮಾರಿಗೆ ಶಿರಾಡಿ ಗಡಿಯ ನಿರ್ಜನ ಪ್ರದೇಶದಲ್ಲಿ ಲಾರಿಗೆ ಅಡ್ಡವಾಗಿ ನಿಂತುಕೊಂಡಿದೆ. ಕೂಡಲೇ ಇನ್ನೋವಾದಿಂದ ಚಾಕು ಹಾಗೂ ಪಿಸ್ತೂಲ್ ಹಿಡಿದ ಮೂವರು ವ್ಯಕ್ತಿಗಳು ಕೆಳಗಿಳಿದು ಲಾರಿಗೆ ಹತ್ತಿದ್ದು, ಅವರಲ್ಲಿ ಒಬ್ಬಾತ ಚಾಲಕನನ್ನು ಎಳೆದು ಡೈವಿಂಗ್ ಸೀಟ್‌ನಲ್ಲಿ ಕುಳಿತು ಲಾರಿ ಚಲಾಯಿಸಿದ್ದಾನೆ.

ಇನ್ನಿಬ್ಬರು ಚಾಕು ಹಾಗೂ ಪಿಸ್ತೂಲ್ ಹಿಡಿದು ಲಾರಿಯಲ್ಲಿದ್ದ ಚಾಲಕ ವಿಘ್ನೇಶ್, ಕ್ಲೀನರ್ ತಬ್ರಾಝ್, ಲೈನರ್‌ಗಳಾದ ಚೇತನ್, ಅರುಣ್ ಎಂಬವರನ್ನು ಬೆದರಿಸಿ, ಹಣಕ್ಕಾಗಿ ಪೀಡಿಸತೊಡಗಿದ್ದಾರೆ. ಈ ಸಂದರ್ಭ ಲಾರಿ ಚಾಲಕ ವಿಘ್ನೇಶ್ ತನ್ನ ಕಿಸೆಯಲ್ಲಿದ್ದ 15 ಸಾವಿರ ರೂ.ನ್ನು ಅವರಿಗೆ ನೀಡಿದ್ದು, ಇನ್ನು ನಮ್ಮ ಬಳಿ ಹಣವಿಲ್ಲವೆಂದು ತಿಳಿಸಿದ್ದಾರೆ. ಆದರೆ ಅದನ್ನೊಪ್ಪದ ದರೋಡೆಕೋರರು ಇವರನ್ನು ಕೊಲ್ಲುವುದಾಗಿ ಬೆದರಿಸಿ, ಇನ್ನಷ್ಟು ಹಣಕ್ಕೆ ಪೀಡಿಸಿದ್ದರೆನ್ನಲಾಗಿದೆ.


ಈ ಸಂದರ್ಭ ಲಾರಿಯ ಡ್ಯಾಷ್ ಬೋರ್ಡ್‌ನಲ್ಲಿಡಲಾಗಿದ್ದ ಮೀನು ವ್ಯವಹಾರದ ಸುಮಾರು 5ರಿಂದ 6ಲಕ್ಷ ರೂಪಾಯಿಯನ್ನೊಳಗೊಂಡ ಹಣದ ಕಟ್ಟನ್ನು ಲಾರಿಯಲ್ಲಿದ್ದವರು ನೀಡಿದ್ದು, ಅದನ್ನು ತೆಗೆದುಕೊಂಡ ದರೋಡೆಕೋರರು ಲಾರಿಯಲ್ಲಿದ್ದವರ ನಾಲ್ಕು ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ. ಶಿರಾಡಿ ಗಡಿ ಹಾಗೂ ಗುಂಡ್ಯದ ನಡುವೆ ಸುಮಾರು ಅರ್ಧ ಗಂಟೆ ದರೋಡೆಕೋರರೆ ಲಾರಿ ಚಲಾಯಿಸಿದ್ದು, ಹಣ, ಸೊತ್ತು ಸಿಕ್ಕಿದ ಬಳಿಕ ಲಾರಿಯನ್ನು ಹಿಂಬಾಲಿಸುತ್ತಿದ್ದ ಕಾರಿನಲ್ಲಿ ಹತ್ತಿ ಪರಾರಿಯಾಗಿದ್ದಾರೆ.

ದರೋಡೆಕೋರರಿದ್ದ ಇನ್ನೋವಾ ವಾಹನದ ನಂಬರನ್ನು ಲಾರಿಯಲ್ಲಿದ್ದವರು ದಾಖಲಿಸಿಕೊಂಡಿದ್ದು, ಪೊಲೀಸರಿಗೆ ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವಿಳಂಬವಾಗಿ ಪೊಲೀಸರಿಗೆ ಮಾಹಿತಿ:

ಘಟನೆ ನಸುಕಿನ ಜಾವ 2ರಿಂದ 2:30ರ ಅವಧಿಯಲ್ಲಿ ನಡೆದಿದ್ದರೂ, ದರೋಡೆಕೋರರು ಮೊಬೈಲ್ ವಶಪಡಿಸಿಕೊಂಡಿದ್ದರಿಂದ ಪೊಲೀಸರಿಗೆ ವಿಷಯ ತಿಳಿಯುವ ವೇಳೆ ಬೆಳಗ್ಗಿನ ಜಾವ ಸುಮಾರು 4 ಗಂಟೆಯಾಗಿತ್ತು.

ದರೋಡೆ ನಡೆದ ಸ್ಥಳ ನಿರ್ಜನ ಪ್ರದೇಶವಾಗಿದ್ದರೂ, ಬಳಿಕ ಸಿಗುವ ಗುಂಡ್ಯದಲ್ಲಿ ಚೆಕ್‌ಪೋಸ್ಟ್, ಅಂಗಡಿ, ಹೊಟೇಲ್‌ಗಳಿವೆ. ಆದರೆ ದರೋಡೆ ನಡೆದ ಬಳಿಕ ಗೊಂದಲಕ್ಕೀಡಾದ ಲಾರಿಯವರು ಎಲ್ಲಿಯೂ ನಿಲ್ಲಿಸದೆ ಪೆರಿಯಶಾಂತಿಯ ಮೂಲಕ ಕೊಕ್ಕಡಕ್ಕೆ ತೆರಳಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದರೋಡೆ ನಡೆದ ವಿಷಯ ತಿಳಿಸಿದ್ದಾರೆ.

ಬಳಿಕ ದರೋಡೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಿದ್ದು, ದರೋಡೆ ನಡೆದ ಸ್ಥಳ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಾಗಿರುವುದರಿಂದ ದರೋಡೆಗೊಳಗಾದವರನ್ನು ಲಾರಿ ಸಮೇತ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News