ಟ್ರಾಯ್ ಆದೇಶ: ಸಮ್ಮರ್ ಆಫರ್ ಹಿಂದೆಗೆದುಕೊಂಡ ಜಿಯೋ

Update: 2017-04-06 17:45 GMT

ಹೊಸದಿಲ್ಲಿ,ಎ.6: ಗುರುವಾರ ದೂರಸಂಪರ್ಕ ನಿಯಂತ್ರಕ ಟ್ರಾಯ್ ಆದೇಶದ ಮೇರೆಗೆ ರಿಲಯನ್ಸ್ ಜಿಯೋ ತನ್ನ ಸಮ್ಮರ್ ಸರ್ಪ್ರೈಸ್ ಆಫರ್‌ನ್ನು ಹಿಂದೆಗೆದು ಕೊಂಡಿದೆ.

ಜಿಯೋ ಮಾ.31ರಂದು ತನ್ನ ಸಮ್ಮರ್ ಸರ್ಪ್ರೈಸ್ ಆಫರ್‌ನ್ನು ಘೋಷಿಸಿದ್ದು, 303 ರೂ.ಅಥವಾ ಅಧಿಕ ಮೊತ್ತದ ಮೊದಲ ರೀಚಾರ್ಜ್ ಮಾಡಿಸುವ ತನ್ನ ಪ್ರೈಮ್ ಚಂದಾದಾರರಿಗೆ ಅವರು ಖರೀದಿಸಿದ ಪ್ಲಾನ್‌ನ ಲಾಭಗಳ ಜೊತೆಗೆ ತನ್ನ ಉಚಿತ ಕೊಡುಗೆಗಳನ್ನು ಇನ್ನೂ ಮೂರು ತಿಂಗಳ ಅವಧಿಗೆ ಮುಂದುವರಿಸುವುದಾಗಿ ಘೋಷಿಸಿತ್ತು.

ಮೂರು ತಿಂಗಳ ಉಚಿತ ಕೊಡುಗೆಯನ್ನು ಹಿಂದೆಗೆದುಕೊಳ್ಳುವಂತೆ ಟ್ರಾಯ್ ಇಂದು ನಿರ್ದೇಶ ನೀಡಿದ್ದು, ಅದರ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ. ಜಿಯೊ ಟ್ರಾಯ್ ನಿರ್ದೇಶವನ್ನು ಸಂಪೂರ್ಣವಾಗಿ ಪಾಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಮೂರು ತಿಂಗಳ ಕೊಡುಗೆಯನ್ನು ಹಿಂದೆಗೆದುಕೊಳ್ಳಲಿದೆ. ಆದರೆ ಕೊಡುಗೆ ಸ್ಥಗಿತಗೊಳ್ಳುವ ಮುನ್ನ ಅದಕ್ಕೆ ಚಂದಾದಾರರಾದ ಎಲ್ಲ ಗ್ರಾಹಕರು ಕೊಡುಗೆಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರಕಟಣೆಯು ತಿಳಿಸಿದೆ.

ಅಚ್ಚರಿಯ ನಡೆಯೊಂದರಲ್ಲಿ, 2017 ಎಪ್ರಿಲ್ 1ರಿಂದ ತನ್ನ ಸೇವೆಗಳಿಗೆ ಶುಲ್ಕ ವಿಧಿಸುವ ನಿರೀಕ್ಷೆಯಿದ್ದ ಜಿಯೋ ತನ್ನ 303 ರೂ. ಮತ್ತು ಅಧಿಕ ಮೊತ್ತದ ಪ್ಲಾನ್‌ಗಳನ್ನು ಖರೀದಿಸಲು ಅಂತಿಮ ಗಡುವನ್ನು ಎ.15ರವರೆಗೆ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News